ಪಂಜಾಬ್‍ಗೆ ಬನ್ನಿ, ಸರ್ದಾರರು ನಿಮ್ಮನ್ನು ರಕ್ಷಿಸುತ್ತಾರೆ; ಬಿಲ್ಕಿಸ್ ಬಾನುಗೆ ಗಾಯಕ ರಬ್ಬಿ ಶೇರ್‍ಗಿಲ್ ಆಹ್ವಾನ

Update: 2022-08-23 02:56 GMT

ಹೊಸದಿಲ್ಲಿ: ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಮಂದಿ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ ಕ್ರಮದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿರುವ ನಡುವೆಯೇ ಗಾಯಕ ರಬ್ಬಿ ಶೇರ್‍ಗಿಲ್ ಅವರು ಸಂತ್ರಸ್ತೆ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ.

"ಪಂಜಾಬ್‍ಗೆ ಬರುವಂತೆ ನಾನು ಬಿಲ್ಕಿಸ್ ಅವರಿಗೆ ಹೇಳ ಬಯಸುತ್ತೇನೆ. ನಮ್ಮ ಕೊನೆ ಹನಿ ರಕ್ತ ಇರುವವರೆಗೂ ನಾವು ನಿಮ್ಮನ್ನು ರಕ್ಷಿಸುತ್ತೇವೆ. ಸರ್ದಾರರು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೇವೆ. ಇದು ಕೇವಲ ನಮ್ಮ ಸಮುದಾಯದ ಬಗ್ಗೆ ಮಾತ್ರ ಅಲ್ಲ. ನಾನು ಅವರನ್ನು ಆಲಂಗಿಸಿಕೊಂಡು ನಿಮ್ಮ ನೋವು, ನಮ್ಮ ನೋವು ಎಂದು ಹೇಳಲು ಬಯಸುತ್ತೇನೆ. ಆಕೆ ಎಂದೂ ಒಬ್ಬಂಟಿಯಲ್ಲ" ಎಂದು ಎನ್‍ಡಿಟಿವಿಯ ನೋ ಸ್ಪಿನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸ್ಪಷ್ಟಪಡಿಸಿದರು.

2002ರ ಗುಜರಾತ್ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಿಲ್ಕಿಸ್ ಬಾನು ಪ್ರಕರಣದಿಂದ ಪ್ರೇರಿತರಾಗಿದ್ದ ರಬ್ಬಿ, 'ಬಿಲ್ಕಿಸ್' ಹಾಡಿನ ಮೂಲಕ ದೇಶಾದ್ಯಂತ ಪ್ರವಾಸ ಮಾಡಿದ್ದರು.

"ಇದು ಬಹುತೇಕ ಪ್ರತಿಯೊಬ್ಬರಿಗೂ ನನ್ನ ಸಂದೇಶ. ದಯವಿಟ್ಟು ನ್ಯಾಯದ ಬಗ್ಗೆ ಕಾಳಜಿ ವಹಿಸಿ ಎಂಬ ಸಂದೇಶ. ಏಕೆಂದರೆ ನೀವು ಇದನ್ನು ಮಾಡದಿದ್ದರೆ, ನಮ್ಮ ಸಮಾಜವನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ. ನಮಗೆ ಹೀರೊಗಳಿಲ್ಲ. ಮುಂದಿನ ಪೀಳಿಗೆ ತೊರೆಯಲು ಬಯಸುತ್ತದೆ" ಎಂದು ಹೇಳಿದರು.

"ನಮ್ಮ ದೇಶದಲ್ಲಿ ನೈತಿಕತೆಯ ಸಂಘರ್ಷ ಇದೆ. ನಾಯಕತ್ವದ ಸಂಘರ್ಷ ಇದೆ. ಮಾಧ್ಯಮ ಮುಂದಡಿ ಇಡಬೇಕು ಎನ್ನುವುದು ನನ್ನ ಸಲಹೆ. ಜನರ ಜತೆ ನೀವು ಮಾತನಾಡಿದರೆ, ನ್ಯಾಯಾಂಗ ಮತ್ತು ರಾಜಕಾರಣಿಗಳು ಬಹುತೇಕ ನಮ್ಮನ್ನು ತ್ಯಜಿಸಿದ್ದಾರೆ. ನಮಗೆ ಪರಸ್ಪರ ನಾವು ಮಾತ್ರ ಇದ್ದೇವೆ" ಎಂದು ಮಾರ್ಮಿಕವಾಗಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News