ಅರ್ಚಕರ ನೇಮಕಾತಿ; ತಮಿಳುನಾಡು ಸರ್ಕಾರದ ನಿಯಮ ಎತ್ತಿಹಿಡಿದ ಹೈಕೋರ್ಟ್

Update: 2022-08-23 02:36 GMT

ಚೆನ್ನೈ: ಹಿಂದೂ ಸಂಪ್ರದಾಯದಲ್ಲಿ ದೇವರ ಮೂರ್ತಿಯನ್ನು ಸ್ಪರ್ಶಿಸಲು ಅವಕಾಶ ಇಲ್ಲದ ಸಮಾಜದವರನ್ನೂ ದೇವಾಲಯಗಳಿಗೆ ಅರ್ಚಕರಾಗಿ ನೇಮಕ ಮಾಡುವ ಸಂಬಂಧ ತಮಿಳುನಾಡು ಸರ್ಕಾರ ಜಾರಿಗೆ ತಂದ ನಿಯಮವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ ಆಗಮ ಶಾಸ್ತ್ರದ ನಿಯಮಾವಳಿಗೆ ಒಳಪಟ್ಟು ನಿರ್ಮಿತವಾಗಿರುವ ಹಾಗೂ ಆ ನಿಯಮಾವಳಿಯ ಅನ್ವಯ ನಡೆಯುತ್ತಿರುವ ದೇವಾಲಯಗಳಿಗೆ ಈ ನಿಯಮದಿಂದ ವಿನಾಯ್ತಿ ನೀಡಿದೆ.

ತಮಿಳುನಾಡು ಸರ್ಕಾರ, ದೇವಾಲಯ ಅರ್ಚಕ ಹುದ್ದೆಗೆ ಅರ್ಹತೆ ಮತ್ತು ನೇಮಕಾತಿಯ ಸಂಬಂಧ ಹೊಸದಾಗಿ ಜಾರಿಗೆ ತಂದಿರುವ ತಮಿಳುನಾಡು ಹಿಂದೂ ಧಾರ್ಮಿಕ ಸಂಸ್ಥೆಗಳ ಉದ್ಯೋಗಿಗಳ (ಸೇವಾ ಸ್ಥಿತಿಗತಿ) ನಿಯಮಾವಳಿ-2020ನ್ನು ವಜಾಗೊಳಿಸುವಂತೆ ಆಗ್ರಹಿಸಿ ಅಖಿಲ ಭಾರತ ಆದಿ ಶೈವ ಶಿವಾಚಾರ್ಯಗಳ ಸೇವಾ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಮುನೀಶ್ವರನಾಥ್ ಭಂಡಾರಿ ಮತ್ತು ನ್ಯಾಯಮೂರ್ತಿ ಎನ್.ಮಾಲಾ ಅವರನ್ನೊಳಗೊಂಡ ನ್ಯಾಯಪೀಠ, ಸರ್ಕಾರದ ನಿಯಮಾವಳಿಯನ್ನು ಎತ್ತಿಹಿಡಿದಿದ್ದು, ಆಗಮಶಾಸ್ತ್ರದ ದೇವಾಲಯಗಳನ್ನು ಹೊರತುಪಡಿಸಿ ಉಳಿದೆಲ್ಲ ದೇವಾಲಯಗಳಿಗೆ ಇದು ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.

ಸಂವಿಧಾನದ 26ನೇ ವಿಧಿ ಅನ್ವಯ ಪ್ರತಿಯೊಂದು ಧಾರ್ಮಿಕ ಗುಂಪುಗಳು, ಧರ್ಮಸಮ್ಮತವಾಗಿ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಿಕೊಂಡು ಬರಲು ಅವಕಾಶವಿದೆ ಎಂದು ನ್ಯಾಯಪೀಠ ಹೇಳಿದೆ ಎಂದು hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News