ಸೆಪ್ಟೆಂಬರ್ 2 ರಂದು ಎಐಎಫ್ಎಫ್ ಚುನಾವಣೆ, ಗುರುವಾರದಿಂದ ನಾಮಪತ್ರ ಸಲ್ಲಿಕೆ

Update: 2022-08-23 07:07 GMT
Photo:twitter

ಹೊಸದಿಲ್ಲಿ: ಎಐಎಫ್‌ಎಫ್‌ ಕಾರ್ಯಕಾರಿ ಸಮಿತಿಗೆ ಸೆಪ್ಟೆಂಬರ್‌ 2ರಂದು ಚುನಾವಣೆ (AIFF elections) ನಡೆಯಲಿದ್ದು, ಆಕಾಂಕ್ಷಿ ಅಭ್ಯರ್ಥಿಗಳು ಆಗಸ್ಟ್‌ 25ರಿಂದ ಹೊಸದಾಗಿ ನಾಮಪತ್ರ ಸಲ್ಲಿಸಬಹುದು ಎಂದು ಚುನಾವಣಾಧಿಕಾರಿ ಪ್ರಕಟಿಸಿದ್ದಾರೆ.

ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ (FIFA) ಬೇಡಿಕೆಯಂತೆ ಸುಪ್ರೀಂ ಕೋರ್ಟ್ ಸೋಮವಾರದಂದು ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ (CoA) ಅನ್ನು ರದ್ದುಪಡಿಸಿತು ಹಾಗೂ  AIFF ಚುನಾವಣೆಯನ್ನು ಒಂದು ವಾರ ಮುಂದೂಡಿತು.

ಸುಪ್ರೀಂಕೋರ್ಟ್  ಆದೇಶದ ಕೆಲವು ಗಂಟೆಗಳ ನಂತರ ಚುನಾವಣಾಧಿಕಾರಿ ಉಮೇಶ್ ಸಿನ್ಹಾ ಅವರು ಹೊಸ ಸೂಚನೆಯನ್ನು ಹೊರಡಿಸಿ ಪ್ರಕ್ರಿಯೆಯನ್ನು ಹೊಸದಾಗಿ ವಿವರಿಸಿದ್ದಾರೆ.

ಗುರುವಾರ ಮತ್ತು ಶನಿವಾರದ ನಡುವೆ ಹುದ್ದೆಗಳಿಗೆ ನಾಮಪತ್ರ ಸಲ್ಲಿಸಬಹುದಾಗಿದ್ದು, ರವಿವಾರ (ಆಗಸ್ಟ್ 28) ಪರಿಶೀಲನೆ ನಡೆಯಲಿದೆ.

ನಾಮಪತ್ರ ಮಾನ್ಯವೆಂದು ಪರಿಗಣಿಸಲ್ಪಟ್ಟಿರುವ ಅಭ್ಯರ್ಥಿಗಳು ಅವರು ಬಯಸಿದಲ್ಲಿ, ಆಗಸ್ಟ್ 29 ರಂದು ನಾಮಪತ್ರವನ್ನು ಹಿಂಪಡೆಯಲು ಅವಕಾಶವಿರುತ್ತದೆ ಮತ್ತು ಚುನಾವಣಾಧಿಕಾರಿಯು ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಆಗಸ್ಟ್ 30 ರಂದು AIFF ವೆಬ್‌ಸೈಟ್‌ನಲ್ಲಿ ಹಾಕಬೇಕು.

ಸೆಪ್ಟೆಂಬರ್ 2 ರಂದು ಹೊಸದಿಲ್ಲಿಯ ಎಐಎಫ್‌ಎಫ್ ಪ್ರಧಾನ ಕಚೇರಿಯಲ್ಲಿ ಚುನಾವಣೆ ನಡೆಯಲಿದ್ದು, ಸೆಪ್ಟೆಂಬರ್ 2 ಅಥವಾ 3 ರಂದು ಫಲಿತಾಂಶ ಪ್ರಕಟಗೊಳ್ಳಬಹುದು ಎಂದು ಚುನಾವಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News