ಮುಂಬೈ ಭವಿಷ್ಯನಿಧಿ ಕಚೇರಿಯಲ್ಲಿ ರೂ. 1000 ಕೋಟಿ ಹಗರಣ?
ಹೊಸದಿಲ್ಲಿ: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ (ಇಪಿಎಫ್‍ಒ)(EPFO) ಇದರ ಮುಂಬೈ ಉಪನಗರ ಕಚೇರಿಯ ಸಿಬ್ಬಂದಿಯಿಂದ ನಡೆದಿದೆಯೆನ್ನಲಾದ ಅವ್ಯವಹಾರಗಳ ಕುರಿತ ತನಿಖೆಯನ್ನು ಸಂಸ್ಥೆಯ ಆಡಳಿತ ಕೈಗೆತ್ತಿಕೊಂಡಿದೆ. ಈ ಅವ್ಯವಹಾರದಿಂದಾಗಿ ಇಪಿಎಫ್‍ಒಗೆ ಸುಮಾರು ರೂ. 1000 ಕೋಟಿಯಷ್ಟು ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ ಎಂದು economictimes ವರದಿ ಮಾಡಿದೆ.
ನಕಲಿ ಖಾತೆಗಳನ್ನು ಸೃಷ್ಟಿಸಿ ನಂತರ ಕಾರ್ಯನಿರ್ವಹಿಸದೇ ಇರುವ ಕಂಪೆನಿಗಳ ಹೆಸರಿನಲ್ಲಿ ಕ್ಲೇಮ್‍ಗಳನ್ನು ಸೆಟ್ಲ್ ಮಾಡುವ ಹೆಸರಿನಲ್ಲಿ ಆ ಖಾತೆಗಳಿಗೆ ಹಣ ವರ್ಗಾಯಿಸಲಾಗುತ್ತಿತ್ತೆಂದು ತಿಳಿಯಲಾಗಿದೆ.
ನಿಯಮಗಳ ಉಲ್ಲಂಘನೆ ಮತ್ತು ತೆರಿಗೆ ವಂಚನೆಯಿಂದ ರೂ. 1000 ಕೋಟಿಯಷ್ಟು ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. ಆಂತರಿಕ ತನಿಖೆ ಮುಂದುವರಿದಿದ್ದು ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು ಅಂತಿಮ ವರದಿಯನ್ನು ಸಂಸ್ಥೆಯ ಉನ್ನತಾಧಿಕಾರಿಗಳಿಗೆ ಸಲ್ಲಿಸಲಾಗುವ ನಿರೀಕ್ಷೆಯಿದೆ.
ಇಪಿಎಫ್‍ಒ ಇದರ ಮುಂಬೈ ಕಾಂಡಿವಲಿ ಕಚೇರಿಯನ್ನು ಕೇಂದ್ರೀಕರಿಸಿ ಈ ಹಗರಣ ನಡೆದಿದೆಯೆನ್ನಲಾಗಿದ್ದು ಪೈಲಟ್‍ಗಳು, ವಲಸಿಗರು ಮತ್ತು ಜೆಟ್ ಏರ್‍ವೇಸ್ ಸಿಬ್ಬಂದಿಗಳ ಇಪಿಎಫ್‍ಒ ನಿಧಿಗಳನ್ನು ಇದಕ್ಕೆ ದುರ್ಬಳಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಜೆಟ್ ಏರ್‍ವೇಸ್ ಉದ್ಯೋಗಿಗಳ ಪಿಎಫ್ ಕ್ಲೇಮುಗಳ ಕುರಿತಂತೆ ವಂಚನೆ ನಡೆಸಿದ ಆರೋಪದ ಮೇಲೆ ಕಾಂಡಿವಲಿ ಪಿಎಫ್ ಕಚೇರಿಯ ಹಿರಿಯ ಸಾಮಾಜಿಕ ಸುರಕ್ಷತಾ ಸಹಾಯಕ ಮಚೀಂದ್ರ ಬಮ್ನೆ ಅವರನ್ನು ವಜಾಗೊಳಿಸಲಾಗಿತ್ತು. ಜೆಟ್ ಏರ್ವವೇಸ್ ಸಂಸ್ಥೆಯ ಪೈಲಟ್‍ಗಳು, ಸಿಬ್ಬಂದಿಗಳ ಪಿಎಫ್ ಖಾತೆಗಳನ್ನು ದುರ್ಬಳಕೆ ಮಾಡಿ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿತ್ತೆಂದು ತಿಳಿದು ಬಂದಿದೆ.
ಇದನ್ನೂ ಓದಿ: ಮಾಂಸಹಾರಿಗಳ ಓಟು ಬೇಡ ಎಂದು ಹೇಳುವ ತಾಕತ್ತು BJPಯವರಿಗಿದೆಯೇ?: ದಿನೇಶ್ ಗುಂಡೂರಾವ್