×
Ad

ಕೆಪಿಟಿ, ನಂತೂರಿನಲ್ಲಿ ವಾಹನ ಮೇಲ್ಸೇತುವೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ

Update: 2022-08-23 17:28 IST

ಮಂಗಳೂರು, ಆ. 23: ಮಂಗಳೂರು ನಗರದಲ್ಲಿ ತೀವ್ರ ವಾಹನ ದಟ್ಟನೆ ಎದುರಿಸುತ್ತಿರುವ ಕೆಪಿಟಿ ಹಾಗೂ  ನಂತೂರುಗಳಲ್ಲಿ ರಾಷ್ಟೀಯ ಹೆದ್ದಾರಿ 66ರಲ್ಲಿ ವಾಹನ ಮೇಲ್ಸೇತುವೆ (ವೆಹಿಕಲ್ ಒವರ್‌ಪಾಸ್-ಎಲ್‌ಒಪಿ) ನಿರ್ಮಾಣವಾಗಲಿದ್ದು ಶೀಘ್ರ ಯೋಜನೆ ಕಾರ್ಯಾನುಷ್ಟಾನಕ್ಕೆ  ಬರಲಿದೆ.

ಸಂಸದ ನಳಿನ್ ಕುಮಾರ್ ಕಟೀಲು ಅವರ  ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಜರಗಿದ ದ.ಕ.ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ  ಲಿಂಗೇಗೌಡ  ಮಾಹಿತಿ ನೀಡಿದರು.

ಕೆಪಿಟಿಯಲ್ಲಿ 25 ಕೋರೂ. ವೆಚ್ಚದಲ್ಲಿ  ಎಲ್‌ಒಪಿ ನಿರ್ಮಾಣಗೊಳ್ಳಲಿದ್ದು ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದೆ. ಮಳೆ ನಿಂತ ಕೂಡಲೇ ಮುಂದಿನ ತಿಂಗಳು ಕಾಮಗಾರಿ ಪ್ರಾರಂಭವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಕೆಳಗಡೆ ಸಾಗಲಿದ್ದು ಸರ್ಕಿಟ್ ಹೌಸ್‌ನಿಂದ ವಿಮಾನ ನಿಲ್ದಾಣ ರಸ್ತೆಗೆ ಎಲ್‌ಒಪಿ ನಿರ್ಮಾಣಗೊಳ್ಳಲಿದೆ ಎಂದರು.

ನಂತೂರಿನಲ್ಲೂ 22 ಕೋ.ರೂ. ವೆಚ್ಚದಲ್ಲಿ  ಎಲ್‌ಒಪಿ ನಿರ್ಮಾಣ ಯೋಜನೆ ಸಿದ್ದಗೊಂಡಿದ್ದು  ಒಂದು ತಿಂಗಳೊಳಗೆ  ಟೆಂಡರ್ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ. ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಇಲ್ಲೂ  ಶೀಘ್ರ ಕಾಮಗಾರಿ  ಆರಂಭಿಸಲಾಗುವುದು  ಎಂದವರು  ವಿವರಿಸಿದರು.

ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಅಡ್ಡಹೊಳೆಯಿಂದ ಧರ್ಮಸ್ಥಳ ಕ್ರಾಸ್‌ವರೆಗಿನ ರಸ್ತೆ  ಕಾಮಗಾರಿ ಈ ವರ್ಷದ ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ.  ಪೆರಿಯಶಾಂತಿಯಿಂದ ಬಿ.ಸಿ. ರೋಡ್‌ವರೆಗಿನ  ಕಾಮಗಾರಿ  2024ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.  ಕಲ್ಲಡ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಫ್ಲೈಒವರ್ ವಿಶೇಷ ವಿನ್ಯಾಸ ಹೊಂದಿರುವ ಹಿನ್ನಲೆಯಲ್ಲಿ ಇದರ ಕಾಮಗಾರಿ 2024ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದರು.

ಪ್ರಸ್ತುತ  ಮಳೆಯಿಂದ  ಹದಗೆಟ್ಟಿರುವ  ಬಿ.ಸಿ.ರೋಡುನಿಂದ ಅಡ್ಡಹೊಳೆಯವರೆಗಿನ ರಸ್ತೆ ದುರಸ್ತಿ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ನಳಿನ್ ಕುಮಾರ್ ಕಟೀಲು  ನೀಡಿದ ಸೂಚನೆಗೆ ಉತ್ತರಿಸಿದ  ಯೋಜನಾ ನಿರ್ದೇಶಕರು ಸೆಪ್ಟಂಬರ್‌ನಲ್ಲಿ  ರಸ್ತೆ ದುರಸ್ತಿ ಕಾಮಗಾರಿಯನ್ನು  ಆರಂಭಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News