ಮಲೇಶ್ಯಾ ಮಾಜಿ ಪ್ರಧಾನಿಯ ಶಿಕ್ಷೆ ;ಎತ್ತಿಹಿಡಿದ ಫೆಡರಲ್ ಕೋರ್ಟ್

Update: 2022-08-23 16:08 GMT
PHOTO : NPR

ಕೌಲಲಾಂಪುರ, ಆ.೨೩: ಆರ್ಥಿಕ ಭ್ರಷ್ಟಾಚಾರದ ಅಪರಾಧದಲ್ಲಿ ಮಲೇಶ್ಯಾದ ಮಾಜಿ ಪ್ರಧಾನಿ ನಜೀಬ್ ರಝಾಕ್‌ಗೆ ಕೆಳನ್ಯಾಯಾಲಯ ವಿಧಿಸಿದ್ದ ೧೨ ವರ್ಷದ ಜೈಲುಶಿಕ್ಷೆಯನ್ನು ಫೆಡರಲ್ ನ್ಯಾಯಾಲಯ ಎತ್ತಿಹಿಡಿದಿದ್ದು ಮತ್ತೆ ರಾಜಕೀಯಕ್ಕೆ ಮರಳುವ ರಝಾಕ್ ಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ.

ಶಿಕ್ಷೆ ರದ್ದತಿ ಕೋರಿ ರಝಾಕ್ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ಮುಖ್ಯ ನ್ಯಾಯಾಧೀಶ ಮೈಮೂನ್ ತುವಾನ್‌ಮತ್, ಜತೆಗೇ ಬದ್ಧತೆಯ ವಾರಾಂಟ್ ಜಾರಿಗೊಳಿಸಿರುವುದರಿಂದ ರಝಾಕ್ ತಕ್ಷಣವೇ ಜೈಲುಸೇರಬೇಕಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸರಕಾರದ ಬೊಕ್ಕಸದಿಂದ ಸುಮಾರು ೧೦.೧ ಮಿಲಿಯನ್ ಡಾಲರ್ ಮೊತ್ತವನ್ನು ತನ್ನ ವೈಯಕ್ತಿಕ ಖಾತೆಗೆ ವರ್ಗಾಯಿಸಿದ ಆರೋಪದಲ್ಲಿ ೬೯ ವರ್ಷದ ನಜೀಬ್  ರಝಾಕ್  ಅಧಿಕಾರ ದುರ್ಬಳಕೆ, ಅಕ್ರಮ ಹಣ ವರ್ಗಾವಣೆ ಮತ್ತು ನಂಬಿಕೆಯ ಉಲ್ಲಂಘನೆಯ ಕ್ರಿಮಿನಲ್ ಅಪರಾಧ ಎಸಗಿದ್ದಾರೆ ಎಂದು ೨೦೨೦ರಲ್ಲಿ ತೀರ್ಮಾನಿಸಿದ್ದ ಕೆಳ ನ್ಯಾಯಾಲಯ ಅವರಿಗೆ ೧೨ ವರ್ಷದ ಜೈಲುಶಿಕ್ಷೆ ವಿಧಿಸಿತ್ತು.

ಇದನ್ನು ಪ್ರಶ್ನಿಸಿ ಅವರು ಟ್ರಿಬ್ಯೂನಲ್‌ಗೆ ಅರ್ಜಿ ಸಲ್ಲಿಸಿದ್ದು ಅಲ್ಲಿ ಅರ್ಜಿ ತಿರಸ್ಕೃತವಾದ ಬಳಿಕ ಫೆಡರಲ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಪಂಚ ಸದಸ್ಯರ ಪೀಠವು, ಮೇಲ್ಮನವಿಯಲ್ಲಿ ಯಾವುದೇ ಅರ್ಹತೆಗಳಿಲ್ಲದ ಕಾರಣ ಅದನ್ನು ತಿರಸ್ಕರಿಸಿ ಕೆಳನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿರುವುದಾಗಿ ತೀರ್ಪು ನೀಡಿದೆ.

ಇದೀಗ ನಜೀಬ್ ರಝಾಕ್ ತಪ್ಪಿತಸ್ಥರೆಂದು ಅಂತಿಮ ತೀರ್ಪು ಪ್ರಕಟವಾಗಿರುವುದರಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಅನರ್ಹರಾಗುತ್ತಾರೆ. ಆದ್ದರಿಂದ ಅವರ ರಾಜಕೀಯ ಭವಿಷ್ಯ ಬಹುತೇಕ ಅಂತ್ಯಗೊAಡAತಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ೨೦೧೮ರ ಚುನಾವಣೆಯಲ್ಲಿ ನಝೀಬ್ ಹಾಗೂ ಅವರ ಪಕ್ಷ ಭಾರೀ ಸೋಲುಂಡಿತ್ತು.  ಮುಂದಿನ ವರ್ಷದ ಸೆಪ್ಟಂಬರ್ ಬಳಿಕ ಮಲೇಶ್ಯಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News