ಬಾಳಾ ಸಾಹೇಬ್ ಹೆಸರಲ್ಲಿ ಮತ ಯಾಚನೆ ಯಾಕೆ ?: ಬಿಜೆಪಿಯ ದೇವೇಂದ್ರ ಫಡ್ನವೀಸ್‌ಗೆ ಶಿವಸೇನೆ ತರಾಟೆ
ಪುಣೆ, ಆ. 23: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಅವರು ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಕನಸು ನನಸಾಗಿಸಲು ಕೆಲಸ ಮಾಡುತ್ತಿರುವುದಾಗಿ ಹೇಳುತ್ತಿರುವುದು ನಗರಾಡಳಿತ ಚುನಾವಣೆಗಳು ಬಾಕಿ ಇರುವ ಮುಂಬೈಯಲ್ಲಿ ಮರಾಠಿಗಳ ಏಕತೆ ಒಡೆಯುವ ತಂತ್ರವಾಗಿದೆ ಎಂದು ಶಿವಸೇನೆ ಮಂಗಳವಾರ ಹೇಳಿದೆ.
‘‘ನೀವು ಬಾಳಾ ಸಾಹೇಬ್ ಹೆಸರಲ್ಲಿ ಮತ ಯಾಚಿಸುತ್ತೀರಿ ಯಾಕೆ? ನಿಮ್ಮ ಮೋದಿ ಯುಗ ಇದೆ, ಮೋದಿ ಅಲೆ ಇಳಿಯುತ್ತಿದೆಯೇ ?’’ ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಪ್ರಶ್ನಿಸಿದೆ.
ಬಿಜೆಪಿಯ ದೇವೇಂದ್ರ ಫಡ್ನವೀಸ್‌ರಂತಹ ನಾಯಕರು ಈಗ ಬಾಳಾ ಸಾಹೇಬ್ ಅವರ ಕನಸನ್ನು ಅಪ್ಪಿಕೊಳ್ಳುತ್ತಿದ್ದಾರೆ. ಆದರೆ, 2014ರಲ್ಲಿ ಶಿವಸೇನೆಯೊಂದಿಗೆ ಸಂಬಂಧವನ್ನು ಕಡಿದುಕೊಳ್ಳುವಾಗ ಅವರು ಪಕ್ಷದ ದಿವಂಗತ ಮುಖ್ಯಸ್ಥರನ್ನು ನೆನಪಿಸಿಕೊಳ್ಳಲಿಲ್ಲ ಎಂದು ಶಿವಸೇನೆ ಹೇಳಿದೆ.
‘ಬಾಳಾ ಸಾಹೇಬ್ ಕನಸು’ ಎಂಬ ಮಾತನ್ನು ಬಿಜೆಪಿ ಬಳಸುತ್ತಿರುವುದು ಮುಂಬೈಯಲ್ಲಿ ಮರಾಠಿಗರ ಏಕತೆಯನ್ನು ಒಡೆಯಲು. ಅಲ್ಲದೆ ಬೇರೇನೂ ಅಲ್ಲ. ಅದಕ್ಕಾಗಿ ಅವರು ಶಿವಸೇನೆಗೆ ಹಾನಿ ಉಂಟು ಮಾಡುತ್ತಿದ್ದಾರೆ ಎಂದು ಅದು ಪ್ರತಿಪಾದಿಸಿದೆ.
ಬಿಜೆಪಿಯ ಹಿರಿಯ ನಾಯಕರಾದ ಲಾಲ್‌ಕೃಷ್ಣ ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಅವರನ್ನು ಮರೆತ ಬಿಜೆಪಿಗೆ ಬಾಳಾ ಸಾಹೇಬ್ ಅವರ ಕನಸುಗಳನ್ನು ಈಡೇರಿಸುವ ಸಾಧ್ಯವೇ ? ಎಂದು ಅದು ಪ್ರಶ್ನಿಸಿದೆ. ಇಂದು ಬಿಜೆಪಿ ನಿಜವಾದ ಬಿಜೆಪಿಯಾಗಿ ಉಳಿದಿಲ್ಲ ಎಂದು ಪ್ರತಿಪಾದಿಸಿದ ಶಿವಸೇನೆ, ಅಡ್ವಾಣಿ ಹಾಗೂ ವಾಜಪೇಯಿ ಅವರಿಗೆ ಸೇರಿದ ಬಿಜೆಪಿ ನಿಜವಾಗಿ ಅಸ್ತಿತ್ವದಲ್ಲಿ ಇದೆಯೇ ಎಂದು ಪ್ರಶ್ನಿಸಿದೆ.