ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳಿಗೆ ಸನ್ಮಾನ ಮಾಡಿರುವುದು ಅಸಹ್ಯಕರ: ನ್ಯಾ. ಸಾಳ್ವಿ

Update: 2022-08-24 16:45 GMT

ಮುಂಬೈ,ಆ.24: ಅಪರಾಧಿಗಳಿಗೆ ಜೈಲು ಶಿಕ್ಷೆಯನ್ನು ರದ್ದುಪಡಿಸುವ ಅಧಿಕಾರ ಸರಕಾರಕ್ಕಿದೆ. ಆದರೆ ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಬಿಡುಗಡೆಯಾದ ಅಪರಾಧಿಗಳನ್ನು ಕೆಲವರು ಸನ್ಮಾನಿಸಿರುವುದು ಅಸಹ್ಯಕರ ಎಂದು ನಿವೃತ್ತ ನ್ಯಾಯಾಧೀಶ ಯು.ಡಿ. ಸಾಳ್ವಿ ಹೇಳಿದ್ದಾರೆ. 14 ವರ್ಷಗಳ ಹಿಂದೆ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾಗಿ ಸಾಳ್ವಿ ಅವರು ಬಿಲ್ಕಿಸ್ ಬಾನು ಪ್ರಕರಣದ ವಿಚಾರಣೆ ನಡೆಸಿದ್ದ ರು ಹಾಗೂ 11 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು.

  ‘‘ ಬಿಲ್ಕಿಸ್ ಬಾನೊ ಪ್ರಕರಣದಲ್ಲಿ 11 ಮಂದಿಯನ್ನು ಅಪರಾಧಿಗಳೆಂದು ತೀರ್ಪು ನೀಡುವ ಮೂಲಕ ತಾನು ವಿಶೇಷವಾದುದನ್ನು ಸಾಧಿಸಿದ್ದೇನೆ ಎಂದು ಭಾವಿಸುವುದಿಲ್ಲ. ತೀರ್ಪು ನೀಡುವುದೇ ನನ್ನ ಕರ್ತವ್ಯವಾಗಿದೆ’’ ಎಂದು ಸಾಳ್ವಿ ಹೇಳಿದ್ದಾರೆ. ‘ಅನ್ಯಾಯ ಹಾಗೂ ತಾರತಮ್ಯದ ವಿರುದ್ಧ ಏಕತೆ’ ಎಂಬ ಸಂಘಟನೆಯು ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

 ‘‘ಜೈಲು ಶಿಕ್ಷೆಯನ್ನು ರದ್ದುಪಡಿಸುವ ಅಧಿಕಾರ ರಾಜ್ಯ ಸರಕಾರಕ್ಕಿದೆ ಕಾನೂನಿನಡಿಯಲ್ಲಿಯೇ ಈ ಅಧಿಕಾರವನ್ನು ರಾಜ್ಯ ಸರಕಾರಕ್ಕೆ ನೀಡಲಾಗಿದೆಯೆಂದು ಸಾಳ್ವೆ ತಿಳಿಸಿದರು. ಆದಾಗ್ಯೂ ಅಪರಾಧಿಗಳನ್ನು ಅವಧಿ ಪೂರ್ಣಗೊಳ್ಳುವ ಮೊದಲೇ ಬಿಡುಗಡೆಗೊಳಿಸಿರುವುದಕ್ಕೆ ಸಂಬಂಧಿಸಿದ ವರದಿಗಳನ್ನು ತಾನು ಪರಿಶೀಲಿಸಿಲ್ಲ ಹಾಗೂ ಅವರ ಬಿಡುಗಡೆಗೆ ಯಾವ್ಯಾವ ಅಂಶಗಳನ್ನು ಪರಿಗಣಿಸಲಾಗಿದೆಯೆಂಬ ಬಗ್ಗೆತನಗೆ ತಿಳಿದಿಲ್ಲವಾದ್ದರಿಂದ ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲವೆಂದು ಸಾಳ್ವಿ ತಿಳಿಸಿದರು.

  ‘‘ಆದರೆ ಬಿಡುಗಡೆಗೊಂಡ ಬಳಿಕ ಕೆಲವರು ಅವರನ್ನು ಸನ್ಮಾನಿಸಿರುವುದು ಅತ್ಯಂತ ಕೆಟ್ಟ ಅಭಿರುಚಿಯಾಗಿದೆ. ಈ ಅಪರಾಧಿಗಳು ತಾವಾಗಿಯೇ ಆ ಸನ್ಮಾನವನ್ನು ಸ್ವೀಕರಿಸಬಾರದಿತ್ತು’’ ಎಂದು ಸಾಳ್ವಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 ಬಿಲ್ಕಿಸ್ ಬಾನು ಪ್ರಕರಣದ 11 ಮಂದಿ ಅಪರಾಧಿಗಳ ಜೈಲು ಶಿಕ್ಷೆಯನ್ನು ರದ್ದುಪಡಿಸಿದ ಗುಜರಾತ್ ಸರಕಾರವು ಅವರನ್ನು ಈ ವರ್ಷದ ಆಗಸ್ಟ್ 15ರಂದು ಬಿಡುಗಡೆಗೊಳಿಸಿತ್ತು.

 ತನಗೆ ಜೀವಬೆದರಿಕೆಯಿದೆಯೆಂದು ಬಿಲ್ಕಿಸ್ ಬಾನು ದೂರು ನೀಡಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಚ್ 2004ರಲ್ಲಿ ಪ್ರಕರಣದ ತನಿಖೆಯನ್ನು ಅಹ್ಮದಾಬಾದ್ನಿಂದ ಮುಂಬೈಗೆ ವರ್ಗಾಯಿಸಿತ್ತು.

 ಸಾಳ್ವೆ ನ್ಯಾಯಾಧೀಶರಾಗಿದ್ದ ಸಿಬಿಐನ ವಿಶೇಷ ನ್ಯಾಯಾಲಯವು 2008ರ ಜೂನ್ 21ರಂದು ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

  ಬಹಳ ಸಮಯದ ಹಿಂದೆ ತಾನು ನೀಡಿದ್ದ ತೀರ್ಪನ್ನು ತಾನು ಮತ್ತೊಮ್ಮೆ ಓದಬೇಕೆಂದು ಬಯಸಿದ್ದೇನೆ. ಆದರೆ ಅದು ಲಭ್ಯವಿಲ್ಲವೆಂದು ಸಾಳ್ವಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News