ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ವೇಳಾಪಟ್ಟಿ ನಿಗದಿಗೆ 28ರಂದು ಸಿಡಬ್ಲುಸಿ ಸಭೆ

Update: 2022-08-24 17:00 GMT

ಹೊಸದಿಲಿ,ಆ.24: ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರ ಚುನಾವಣೆಯ ನಿಖರ ದಿನಾಂಕವನ್ನು ನಿಗದಿಪಡಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲುಸಿ)ಯು ರವಿವಾರ ಸಭೆ ನಡೆಸಲಿದೆ.

ಸಿಡಬ್ಲುಸಿ ಸಭೆಯ ಅಧ್ಯಕ್ಷತೆಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ವಹಿಸಲಿದ್ದಾರೆಂದು ಪಕ್ಷದ ನಾಯಕ ಕೆ.ಸಿ.ವೇಣುಗೋಪಾಲ್ ಬುಧವಾರ ಟ್ವೀಟ್ ಮಾಡಿದ್ದಾರೆ.

 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಯ ಹಿನ್ನೆಲೆಯಲ್ಲಿ ರಾಹುಲ್ಗಾಂಧಿ ಕಾಂಗ್ರೆಸ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 543 ಲೋಕಸಭಾ ಸ್ಥಾನಗಳ ಪೈಕಿ 52 ಸ್ಥಾನಗಳನ್ನು ಮಾತ್ರವೇ ಗೆದ್ದಿತ್ತು.

ರಾಹುಲ್ಗಾಂಧಿ ರಾಜೀನಾಮೆ ಬಳಿಕ ಸೋನಿಯಾಗಾಂಧಿ ಅವರು ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2020ರ ಆಗಸ್ಟ್ನಲ್ಲಿ ಜಿ-23 ಎಂದೇ ಕರೆಯಲ್ಪಡುವ 23 ಮಂದಿ ಕಾಂಗ್ರೆಸ್ ನಾಯಕರ ಗುಂಪೊಂದು, ಪಕ್ಷದ ಸಂಘಟನೆಯಲ್ಲಿ ಸಮಗ್ರ ಬದಲಾವಣೆಯಾಗಬೇಕೆಂದು ಆಗ್ರಹಿಸಿ ಸೋನಿಯಾ ಅವರಿಗೆ ಪತ್ರ ಬರೆದಿದ್ದರು. ಪಕ್ಷಕ್ಕೆ ಸಕ್ರಿಯವಾದ ಅಧ್ಯಕ್ಷರೊಬ್ಬರ ಅಗತ್ಯವಿದೆಯೆಂದು ಜಿ-23 ನಾಯಕರು ಪ್ರತಿಪಾದಿಸಿದ್ದರು.

 ನೂತನ ಕಾಂಗ್ರೆಸ್ ಅಧ್ಯಕ್ಷ ಆಯ್ಕೆಯು ಸೆಪ್ಟೆಂಬರ್ 20ರೊಳಗೆ ನಡೆಯಲಿದೆಯೆಂದು ಕಾಂಗ್ರೆಸ್ ಪಕ್ಷ ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News