ಇರಾನ್ ಪರಮಾಣು ಒಪ್ಪಂದ ತಡೆಗೆ ಇಸ್ರೇಲ್ ಶತಪ್ರಯತ್ನ

Update: 2022-08-25 15:44 GMT

ಜೆರುಸಲೇಂ,  ಆ.೨೫:  ಇರಾನ್ ಪರಮಾಣು ಒಪ್ಪಂದವನ್ನು ಪುನರುಜ್ಜೀವನಗೊಳಿಸುವ ಮಾತುಕತೆಗಳನ್ನು ನಿಲ್ಲಿಸುವ ಬಗ್ಗೆ ತನ್ನ ಮಿತ್ರದೇಶಗಳಿಗೆ ಮನವರಿಕೆ ಮಾಡಲು ಇಸ್ರೇಲ್ ರಾಜತಾಂತ್ರಿಕ ಪ್ರವಾಸಗಳು, ಪಾಶ್ಚಿಮಾತ್ಯ ನಾಯಕರಿಗೆ ಕರೆಗಳು ಮತ್ತು ಸರಣಿ ಪತ್ರಿಕಾಗೋಷ್ಟಿಗಳ ಮೂಲಕ ಅಂತಿಮ ಕ್ಷಣದ ಪ್ರಯತ್ನವನ್ನು ತೀವ್ರಗೊಳಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

‌೨೦೧೫ರ ಒಪ್ಪಂದ ಪುನರುಜ್ಜೀವನದ ಕುರಿತು ಇರಾನ್ನ ಸಲಹೆಗಳಿಗೆ ಅಮೆರಿಕ ಪ್ರತಿಕ್ರಿಯಿಸುತ್ತಿರುವಂತೆಯೇ, ಒಪ್ಪಂದದ  ಮರುಸ್ಥಾಪನೆಯಿಂದ ಆಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಇಸ್ರೇಲ್ ಬುಧವಾರ ಎಚ್ಚರಿಕೆ ನೀಡಿದೆ. "ಈಗ ಮಾತುಕತೆಯ ಟೇಬಲ್ ಮೇಲಿರುವುದು ಅತ್ಯಂತ ಕೆಟ್ಟ ಒಪ್ಪಂದವಾಗಿದೆ. 

ಈ ಒಪ್ಪಂದವು ಇರಾನ್ಗೆ ವರ್ಷಕ್ಕೆ ೧೦೦ ಶತಕೋಟಿ ಡಾಲರ್ ಮೊತ್ತವನ್ನು ನೀಡಲಿದೆ. ಈ ಹಣವನ್ನು ಇರಾನ್ ಬೆಂಬಲಿತ ಹೋರಾಟಗಾರರ ತಂಡವಾದ ಹಮಾಸ್, ಹಿಝ್ಬುಲ್ಲಾ ಹಾಗೂ ಇಸ್ಲಾಮಿಕ್ ಜಿಹಾದ್ ಸಂಘಟನೆ ಮಧ್ಯಪ್ರಾಚ್ಯದ ಸ್ಥಿರತೆಯನ್ನು ಹಾಳುಮಾಡಲು ಹಾಗೂ ವಿಶ್ವದಾದ್ಯಂತ ಭಯೋತ್ಪಾದನೆಯನ್ನು ಹರಡಲು ಬಳಸಲಿದೆ. ಈ ಬಗ್ಗೆ ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನ್ ಮುಖಂಡರ ಜತೆ ಇತ್ತೀಚೆಗೆ ಮಾತನಾಡಿದ್ದು,  ಸಂಧಾನ ಮಾತುಕತೆಯನ್ನು ಅಂತ್ಯಗೊಳಿಸುವ ಸಮಯ ಬಂದಿದೆ ಎಂದವರಿಗೆ ಹೇಳಿದ್ದೇನೆ"  ಎಂದು ಇಸ್ರೇಲ್ ಪ್ರಧಾನಿ ಯಾಯಿರ್ ಲ್ಯಾಪಿಡ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಸಂಧಾನ ಮಾತುಕತೆಯಲ್ಲಿ ಇತ್ತೀಚಿನ ದಿನಗಳಲ್ಲಿ ೨ ಬೆಳವಣಿಗೆ ನಡೆದಿದ್ದು  ವಿಶ್ವಸಂಸ್ಥೆಯ ಕೆಲವು  ಅಧಿಕಾರಿಗಳು ತನ್ನ ಪರಮಾಣು ವ್ಯವಸ್ಥೆಯನ್ನು ಪರಿಶೀಲಿಸುವುದನ್ನು ತಡೆಯುವ ನಿಲುವಿನಿಂದ  ಇರಾನ್ ಹಿಂದೆ ಸರಿದಿದ್ದರೆ, ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ಸ್ ಕಾರ್ಪ್ಸ್ ಅನ್ನು ಭಯೋತ್ಪಾದಕರ ಕಪ್ಪುಪಟ್ಟಿಯಿಂದ ತೆಗೆಯಲು ಅಮೆರಿಕ ಸಮ್ಮತಿಸಿದೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಲ್ಯಾಪಿಡ್ "ನಮ್ಮ ದೃಷ್ಟಿಯಲ್ಲಿ ಇದು ಬೈಡನ್ ಅವರೇ ನಿಗದಿಪಡಿಸಿದ ಮಾನದಂಡಗಳನ್ನು (ಇರಾನ್ ಪರಮಾಣು ರಾಷ್ಟ್ರವಾಗುವುದನ್ನು ತಡೆಯುವ) ಪೂರೈಸುವುದಿಲ್ಲ" ಎಂದರು.

ಒಪ್ಪಂದದ ಕರಡು ಪಠ್ಯವು ಯುರೇನಿಯಂ ಸಂಸ್ಕರಣೆಗೆ ಬಳಸುವ ಸೆಂಟ್ರಿಪ್ಯೂಸ್ಗಳ ನಾಶವನ್ನು ಸೂಚಿಸುವುದಿಲ್ಲ. ಇರಾನ್ ಅವುಗಳನ್ನು ಯಾವುದೇ ಕ್ಷಣದಲ್ಲಿ ಮರು ಆರಂಭಿಸಲು ಅವಕಾಶವಿದೆ ಎಂದು ಸುದ್ಧಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ಇಸ್ರೇಲ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News