ರಾಜ್ಯದಲ್ಲಿ ಕಬ್ಬಿಣದ ಆದಿರಿನ ವಾರ್ಷಿಕ ಉತ್ಪಾದನಾ ಮಿತಿ ಏರಿಕೆ: ಸುಪ್ರೀಂಕೋರ್ಟ್ ಆದೇಶ

Update: 2022-08-26 15:28 GMT
photo : the new indian express

ಹೊಸದಿಲ್ಲಿ,ಮಾ.26: ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಗಣಿಗಳಲ್ಲಿ ಕಬ್ಬಿಣದ ಆದಿರಿನ ವಾರ್ಷಿಕ ಉತ್ಪಾದನೆಯ ಮಿತಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಏರಿಸಿದೆ. ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ವಾರ್ಷಿಕ ಕಲ್ಲಿದ್ದಲು ಉತ್ಪಾದನೆಯ ಮಿತಿಯನ್ನು ಸುಪ್ರೀಂಕೋರ್ಟ್ 7 ಮಿಲಿಯ ಮೆಟ್ರಿಕ್ ಟನ್ (ಎಂಎಂಟಿ)ಗಳಿಂದ 15 ಮಿಲಿಯ ಮೆಟ್ರಿಕ್ ಟನ್ಗಳಿಗೆ ಹಾಗೂ ಬಳ್ಳಾರಿಯಲ್ಲಿ 28 ಎಂಎಂಟಿಯಿಂದ 35 ಎಂಎಂಟಿಗೆ ಹೆಚ್ಚಿಸಿದೆ.

 ಇತರ ರಾಜ್ಯಗಳ ಮಾದರಿಯಲ್ಲಿ ಕಬ್ಬಿಣದ ಆದಿರು ಉತ್ಪಾದನೆಯ ಸೀಲಿಂಗ್ ಮಿತಿಯನ್ನು ಹೆಚ್ಚಿಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಈ ಆದೇಶವನ್ನು ಜಾರಿಗೊಳಿಸಿದೆ.

 ಸುಪ್ರೀಂಕೋರ್ಟ್ನಿಂದ ನೇಮಕಗೊಂಡ ಕೇಂದ್ರೀಯ ಸಬಲೀಕರಣ ಸಮಿತಿ (ಸಿಇಸಿ) ಕೂಡಾ ಈ ಮೂರು ಜಿಲ್ಲೆಗಳಲ್ಲಿ ಕಬ್ಬಿಣದ ಆದರಿನ ಉತ್ಪಾದನೆಗೆ ಇರುವ ಸೀಲಿಂಗ್ ಮಿತಿಯನ್ನು ತೆಗೆದು ಹಾಕುವ ಬಗ್ಗೆ ಒಲವು ವ್ಯಕ್ತಪಡಿಸಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯ ಕಬ್ಬಿಣದ ಆದಿರುವ ಉತ್ಪಾದನೆಗೆ ವಿಧಿಸಲಾದ ಮಿತಿಯನ್ನು ತೆಗೆದುಹಾಕುವ ಬದಲು ಉತ್ಪಾದನೆಯ ಮಿತಿಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿರುವ ಕಬ್ಬಿಣದ ಆದಿರು ಗಣಿಗಳಲ್ಲಿ ಈಗಾಗಲೇ ಉತ್ಖನನ ನಡೆಸಲಾದ ಕಬ್ಬಿಣದ ಆದಿರನ್ನು ರಾಜ್ಯದ ಹೊರಗೆ ಮಾರಾಟ ಮಾಡಲು ಸರ್ವೋಚ್ಚ ನ್ಯಾಯಾಲಯವು ಕಬ್ಬಿಣದ ಆದಿರು ಕಂಪೆನಿಗಳಿಗೆ ಅನುಮತಿ ನೀಡಿತ್ತು.

ಕೇಂದ್ರ ಸರಕಾರದ ನಿಲುವನ್ನು ಕೂಡಾ ಗಣನೆಗೆ ತೆಗೆದುಕೊಂಡ ನ್ಯಾಯಪೀಠವು ಕಬ್ಬಿಣದ ಆದರಿನ ರಫ್ತಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆಗೆದುಹಾಕಿದೆ ಹಾಗೂ ಸಂಬಂಧಪಟ್ಟ ಇಲಾಖೆಗಳು ವಿಧಿಸಿರುವ ಶರತ್ತುಗಳನ್ನು ಅನುಸರಿಸುವಂತೆಯೂ ಕಂಪೆನಿಗಳಿಗೆ ಸೂಚಿಸಿದೆ.

  ‘‘ ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಕರ್ನಾಟಕ ರಾಜ್ಯದ ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿರುವ ವಿವಿಧ ಗಣಿಗಳಲ್ಲಿ ಉತ್ಖನನ ಮಾಡಲಾದ ಹಾಗೂ ಗೋದಾಮುಗಳಲ್ಲಿ ಸಂಗ್ರಹಿಸಿಡಲಾದ ಕಬ್ಬಿಣದ ಆದಿರನ್ನು ಇ-ಹರಾಜನ್ನು ಪ್ರಕ್ರಿಯೆಯನ್ನು ನಡೆಸದೆಯೇ ಮಾರಾಟ ಮಾಡಲು ಕೋರಿ ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ಅನುಕೂಲಕರವಾಗಿ ಪರಿಶೀಲಿಸಲು ನಿರ್ಧರಿಸಿದ್ದೇವೆ ’’ ಎಂದು ನ್ಯಾಯಪೀಠ ತಿಳಿಸಿದೆ.

ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಕ್ರಮವಾಗಿ ಹಾಗೂ ರಾಜ್ಯದ ಖನಿಜ ಸಂಪನ್ಮೂಲಗಳನ್ನು ಭವಿಷ್ಯದ ತಲೆಮಾರಿಗಾಗಿ ಕಾಪಾಡಿಡುವ ಉದ್ದೇಶದಿಂದಸರ್ವೋಚ್ಚ ನ್ಯಾಯಾಲಯವು ಕರ್ನಾಟಕದಲ್ಲಿ ಕಬ್ಬಿಣದ ಆದಿರಿನ ರಫ್ತನ್ನು 2012ರಲ್ಲಿ ನಿಷೇಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News