ಇರಾನ್ ಅಧ್ಯಕ್ಷರ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ ದಾಖಲು

Update: 2022-08-26 16:59 GMT

ವಾಷಿಂಗ್ಟನ್, ಆ.26: 1988ರಲ್ಲಿ ಇರಾನ್ನ ಸಾವಿರಾರು ರಾಜಕೀಯ ಕೈದಿಗಳ ಹತ್ಯಾಕಾಂಡದಲ್ಲಿ ಇರಾನ್ನ ಈಗಿನ ಅಧ್ಯಕ್ಷ ಇಬ್ರಾಹಿಂ ರೈಸಿ ಅವರೂ ಶಾಮೀಲಾಗಿದ್ದರು ಎಂದು ಆರೋಪಿಸಿ ಇರಾನ್ನ ಪ್ರಮುಖ ವಿರೋಧಿ ಸಂಘಟನೆ  ಅಮೆರಿಕದಲ್ಲಿ ಮೊಕದ್ದಮೆ ದಾಖಲಿಸಿದೆ.

ಇರಾನ್ನ ಆಡಳಿತವನ್ನು ವಿರೋಧಿಸಿದ ಸುಮಾರು 30,000 ಜನರನ್ನು ಟೆಹ್ರಾನ್ನ ಕುಖ್ಯಾತ ಎವಿನ್ ಮತ್ತು ಗೊಹರ್ದಾಶ್ತ್ ಜೈಲುಗಳಲ್ಲಿ ಅನ್ಯಾಯವಾಗಿ ಮತ್ತು ಯಾವುದೇ ಸೂಕ್ತ ಪ್ರಕ್ರಿಯೆ ನಡೆಸದೆ ಹತ್ಯೆ ಮಾಡಲಾಗಿದೆ ಎಂದು ಅಮೆರಿಕದ ನ್ಯೂಯಾರ್ಕ್ ರಾಜ್ಯದಲ್ಲಿ ದಾಖಲಿಸಿರುವ ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ. ರೈಸಿ 2021 ಆಗಸ್ಟ್ನಲ್ಲಿ ಇರಾನ್ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

`ನ್ಯಾಷನಲ್ ಕೌನ್ಸಿಲ್ ಆಫ್ ರೆಸಿಸ್ಟೆನ್ಸ್ ಆಫ್ ಇರಾನ್' ಎಂಬ ಸಂಘಟನೆ ಮೊಕದ್ದಮೆ ದಾಖಲಿಸಿದ್ದು ಹತ್ಯೆ ನಡೆದ ಸಂದರ್ಭ ರೈಸಿ ಟೆಹ್ರಾನ್ನಲ್ಲಿ ಡೆಪ್ಯೂಟಿ ಪ್ರಾಸಿಕ್ಯೂಟರ್ ಆಗಿದ್ದರು ಮತ್ತು ಕೈದಿಗಳ ಅಪರಾಧ ಮತ್ತು ಮರಣದಂಡನೆ ಪ್ರಕ್ರಿಯೆಯ ಉಸ್ತುವಾರಿ ವಹಿಸಿದ್ದ `ಡೆತ್ ಕಮಿಷನ್'ನ ನಾಲ್ವರು ಸದಸ್ಯರಲ್ಲಿ ಒಬ್ಬರಾಗಿದ್ದರು.

ಆದ್ದರಿಂದ ಅವರ ವಿರುದ್ಧ ವೈಯಕ್ತಿಕವಾಗಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಸಂಘಟನೆಯ ಪ್ರತಿನಿಧಿ ಸೂನಾ ಶಮ್ಸಾನಿ ಹೇಳಿದ್ದಾರೆ. ಈ ಮೊಕದ್ದಮೆ ನಮ್ಮ ಅಭಿಯಾನದ ಒಂದು ಭಾಗವಾಗಿದೆ. ರೈಸಿ ಮತ್ತು ಇರಾನ್ನ ಪರಮೋಚ್ಛ ಮುಖಂಡ ಅಯತುಲ್ಲಾ ಖಾಮಿನೈ ಸೇರಿದಂತೆ ಕ್ರಿಮಿನಲ್ ಮುಖಂಡರಿಗೆ ಶಿಕ್ಷೆಯಾಗುವವರೆಗೆ ನಮ್ಮ ಅಭಿಯಾನ ಮುಂದುವರಿಯಲಿದೆ ಎಂದವರು ಹೇಳಿದ್ದಾರೆ.

ಸೆಪ್ಟಂಬರ್ನಲ್ಲಿ ನ್ಯೂಯಾರ್ಕ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ 77ನೇ ಮಹಾಸಭೆಯಲ್ಲಿ ಪಾಲ್ಗೊಳ್ಳಲು ರೈಸಿ ನ್ಯೂಯಾರ್ಕ್ ನಗರಕ್ಕೆ ಆಗಮಿಸುವ ನಿರೀಕ್ಷೆಯಿದ್ದು ಆಗ ಅವರ ವಿರುದ್ಧದ ದೂರಿನ ಪ್ರತಿಯನ್ನು ಅವರಿಗೆ ವೈಯಕ್ತಿಕವಾಗಿ ಹಸ್ತಾಂತರಿಸಲಾಗುವುದು ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News