ಲಾಸನ್ ಡೈಮಂಡ್ ಲೀಗ್ ಪ್ರಶಸ್ತಿ ಗೆದ್ದ ನೀರಜ್ ಛೋಪ್ರಾ

Update: 2022-08-27 02:09 GMT
ನೀರಜ್ ಛೋಪ್ರಾ (File Photo: PTI)

ಲಾಸನ್: ಒಲಿಂಪಿಕ್ ಚಾಂಪಿಯನ್(Olympic Champion) ಜಾವೆಲಿನ್(javelin) ಪಟು ಭಾರತದ ನೀರಜ್ ಛೋಪ್ರಾ(Neeraj Chopra) ಶುಕ್ರವಾರ ಡೈಮಂಡ್ ಲೀಗ್(Lausanne Diamond League) ಪ್ರಶಸ್ತಿ ಗೆದ್ದ ಮೊಟ್ಟಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಲಾಸೆನ್ ಲೀಗ್ ಗೆಲ್ಲುವ ಮೂಲಕ ಅವರು ಈ ಐತಿಹಾಸಿಕ ಸಾಧನೆ ಮಾಡಿದರು.

ಕಳೆದ ತಿಂಗಳು ನಡೆದ ವಿಶ್ವ ಚಾಂಪಿಯನ್‍ಶಿಪ್ ವೇಳೆ ಆದ ತೊಡೆ ಸಂಧಿ ಗಾಯದ ಕಾರಣದಿಂದ ಕಾಮನ್‍ವೆಲ್ತ್(Commonwealth Games) ಕೂಟದಿಂದ ಹಿಂದೆ ಸರಿದಿದ್ದ 24 ವರ್ಷ ವಯಸ್ಸಿನ ಛೋಪ್ರಾ, ಲಾಸೆನ್ ಕೂಟದ ಮೊದಲ ಯತ್ನದಲ್ಲೇ 89.08 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದಿದ್ದ ಛೋಪ್ರಾ, ತಮಗೆ ಯಾವ ಗಾಯವೂ ಆಗಿಲ್ಲ ಎಂಬ ರೀತಿಯಲ್ಲಿ ಸರಾಗವಾಗಿ ಮೊದಲ ಯತ್ನದಲ್ಲೇ ತಮ್ಮ ವೃತ್ತಿಬದುಕಿನ ಅತ್ಯುತ್ತಮ ಎನಿಸಿದ 89.08 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಗಮನ ಸೆಳೆದರು. ಮೂರನೇ ಯತ್ನದಲ್ಲಿ ಪಾಸಿಂಗ್ ಕೊಡುವ ಮುನ್ನ ಎರಡನೇ ಯತ್ನದಲ್ಲಿ 85.18 ಮೀಟರ್ ಎಸೆದರು. ನಾಲ್ಕನೇ ಯತ್ನದಲ್ಲಿ ಫೌಲ್ ಆದರೆ ಐದನೇ ಯತ್ನದಲ್ಲಿ ಮತ್ತೆ ಪಾಸಿಂಗ್ ನೀಡಿದರು. ಅಂತಿಮ ಯತ್ನದಲ್ಲಿ 80.04 ಮೀಟರ್ ದೂರಕ್ಕೆ ಜಾವೆಲಿನ್ ಎಸೆದರು. ಐದನೇ ಸುತ್ತು ಮುಗಿದ ಬಳಿಕ ಅಗ್ರ ಮೂವರು ಮಾತ್ರ ಆರನೇ ಯತ್ನದ ಅವಕಾಶ ಪಡೆಯುತ್ತಾರೆ.

ಹರ್ಯಾಣದ ಪಾಣಿಪತ್ ಬಳಿಯ ಖಂದ್ರಾ ಗ್ರಾಮದವರಾದ ಛೋಪ್ರಾ, ಡೈಮಂಡ್ ಲೀಗ್ ಪ್ರಶಸ್ತಿ ಗೆದ್ದ ಮೊಟ್ಟಮೊದಲ ಭಾರತೀಯ ಎಂಬ ಇತಿಹಾಸ ಬರೆದರು. ಛೋಪ್ರಾಗಿಂತ ಮೊದಲು ಡಿಸ್ಕಸ್ ಥ್ರೋ ಪಟು ವಿಕಾಸ್ ಗೌಡ ಡೈಮಂಡ್ ಲೀಗ್ ಕೂಟದ ಅಗ್ರ ಮೂವರ ಪೈಕಿ ಒಬ್ಬರಾಗಿ ಕಾಣಿಸಿಕೊಂಡಿದ್ದರು. ಈ ಕೂಟದಲ್ಲಿ ವಿಕಾಸ್‍ಗೌಡ ಎರಡು ಬಾರಿ ದ್ವಿತೀಯ ಹಾಗೂ ಎರಡು ಬಾರಿ ಮೂರನೇ ಸ್ಥಾನ ಪಡೆದಿದ್ದರು.

ಇದನ್ನೂ ಓದಿ: ನಿಷೇಧಾಜ್ಞೆಯಿಂದ ನಷ್ಟ: ಕೊಡಗಿನ ವ್ಯಾಪಾರಿಗಳ ಬೇಸರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News