ಕುಟುಂಬಿಕರ ದುಬೈ ಪ್ರಯಾಣ ತಡೆಯಲು ಮದ್ಯವ್ಯಸನಿಯಿಂದ ವಿಮಾನದಲ್ಲಿ ಹುಸಿಬಾಂಬ್ ಬೆದರಿಕೆ

Update: 2022-08-27 15:28 GMT
photo :NDTV 

ಚೆನ್ನೈ ಆ.27: ತನ್ನ ಕುಟುಂಬದ ಸದಸ್ಯರು ದೇಶದಿಂದ ಹೊರಗೆ ಪ್ರಯಾಣಿಸುವುದನ್ನು ತಡೆಗಟ್ಟಲು ಬಯಸಿದ ದುಬೈಗೆ ತೆರಳುವ ವಿಮಾನಕ್ಕೆ ಹುಸಿಬಾಂಬ್ ಬೆದರಿಕೆ ಕರೆ ಮಾಡಿದ್ದ ಮದ್ಯವ್ಯಸನಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

 ಚೆನ್ನೈನ ನಿವಾಸಿಯೊಬ್ಬರು ತನ್ನ ಕುಟುಂಬದ ಇಬ್ಬರು ಸದಸ್ಯರು ದುಬೈಗೆ ತೆರಳುವುದನ್ನು ತಡೆಯಲು ಬಯಸಿದ್ದರು. ಅದಕ್ಕಾಗಿ ಆತ ನಗರದ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಮಾನದಲ್ಲಿ ಬಾಂಬ್ ಇರುವುದಾಗಿ ಹುಸಿ ಕರೆ ಮಾಡಿದ್ದರೆನ್ನಲಾಗಿದೆ. ಕೂಡಲೇ ಕಾರ್ಯಪ್ರವೃತ್ತವಾದ ಭದ್ರತಾ ಏಜೆನ್ಸಿಗಳು ಇಂದು ಮುಂಜಾನೆ 7:20ಕ್ಕೆ ದುಬೈಗೆ ನಿರ್ಗಮಿಸಲಿದ್ದ ಇಂಡಿಗೋ ವಿಮಾನದಲ್ಲಿ ಯಾವುದೇ ಸ್ಫೋಟಕ ಸಾಧನಗಳನ್ನು ಇರಿಸಲಾಗಿದೆಯೆಂದು ಎಂದು ಪೂರ್ಣ ಪ್ರಮಾಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.

ಆದರೆ ಆ ವಿಮಾನದಲ್ಲಿ ಅಂತಹ ಯಾವುದೇ ಸಾಧನಗಳು ಪತ್ತೆಯಾಗದೆ ಇದ್ದುದರಿಂದ ಅಧಿಕಾರಿಗಳು ಸಮಾಧಾನದ ನಿಟ್ಟುಸಿರೆಳೆದರು.

ತದನಂತರ ಭದ್ರತಾ ಏಜೆನ್ಸಿಗಳು ಈ ಕರೆಯನ್ನು ಮಾಡಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿದರು. ವಿಚಾರಣೆಯ ವೇಳೆ ಆತ ತಾನು ತನ್ನ ಸಂಬಂಧಿಕರು ದುಬೈಗೆ ತೆರಳುವುದನ್ನು ತಡೆಯುವುದಕ್ಕಾಗಿ ಹುಸಿ ಬಾಂಬ್ ಕರೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕೂಡಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ವಿಮಾನವು ಕೆಲವು ತಾಸುಗಳ ಬಳಿಕ ತಡವಾಗಿ ದುಬೈಗೆ ಪ್ರಯಾಣಿಸಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News