ಬಾಂಗ್ಲಾ ಗಡಿಯ ಸಮೀಪ ಮಹಿಳೆಯ ಅತ್ಯಾಚಾರ: ಇಬ್ಬರು ಬಿಎಸ್ಎಫ್ ಯೋಧರ ಬಂಧನ‌

Update: 2022-08-27 15:46 GMT
photo :NDTV

ಕೋಲ್ಕತಾ,ಆ.27: ಭಾರತದಿಂದ ಬಾಂಗ್ಲಾದೇಶವನ್ನು ಪ್ರವೇಶಿಸಲು ಯತ್ನಿಸಿದ್ದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಭಾರತೀಯ ಗಡಿಭದ್ರತಾಪಡೆಯ (ಬಿಎಸ್ಎಫ್) ಇಬ್ಬರು ಸಿಬ್ಬಂದಿಯನ್ನು ಬಂಧಿಸಲಾಗಿದೆಯೆಂದು ಈ ಅರೆಸೈನಿಕ ಪಡೆಯ ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಬಿಎಸ್ಎಫ್  ನ ಸಹಾಯಕ ಸಬ್ಇನ್ಸ್ಪೆಕ್ಟರ್ ಹಾಗೂ ಕಾನ್ಸ್ಟೇಬಲ್ ಅವರನ್ನು ಶುಕ್ರವಾರ ಬಂಧಿತ ಆರೋಪಿಗಳಾಗಿದ್ದು, ಅವರನ್ನು ಪಶ್ಚಿಮ ಬಂಗಾಳ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 ಆರೋಪಿಗಳನ್ನು ಅಮಾನತುಗೊಳಿಸಲಾಗಿದ್ದು, ಅವರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ಬಿಎಸ್ಎಫ್ ನ ದಕ್ಷಿಣ ಬಂಗಾಳ ವಿಭಾಗದ ಗಡಿಮುಂಚೂಣಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಶ್ಚಿಮಬಂಗಾಳದ 24 ಪರಗಣ ಜಿಲ್ಲೆಯ ಬಾಂಗ್ಲಾ ಗಡಿಯ ಹೊರಠಾಣೆಯ ಸಮೀಪ ಆಗಸ್ಟ್ 26ರಂದು ಬೆಳಗ್ಗೆ ಈ ಘಟನೆ ನಡೆದಿರುವುದಾಗಿ ಅವರು ಹೇಳಿದದಾರೆ.

    

‘ಭಾರತದಿಂದ ಬಾಂಗ್ಲಾದೇಶವನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದ ಮಹಿಳೆಯನ್ನು ಸೆರೆಹಿಡಿದ ಬಿಎಸ್ಎಫ್ ಕಾನ್ಸ್ಟೇಬಲ್ ಒಬ್ಬಾತ ಆಕೆಯನ್ನು ಹತ್ತಿರದ ಹೊಲಕ್ಕೆ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರ ವೆಸಗಿದ್ದಾನೆ. ಬಿಎಸ್ಎಫ್ ನ ಸಹಾಯಕ ಸಬ್ಇನ್ಸ್ಪೆಕ್ಟರ್ ಒಬ್ಬಾತ ಆತನಿಗೆ ಈ ಅಪರಾಧವನ್ನು ಎಸಗುವುದಕ್ಕೆ ನೆರವಾಗಿದ್ದಾನೆ ’’ ಎಂದು ಅಧಿಕಾರಿ ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆಯು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ ಬಳಿಕ ಘಟನೆಯು ಬೆಳಕಿಗೆ ಬಂದಿತ್ತು.

ಘಟನೆಯ ಬಗ್ಗೆ ತಿಳಿದುಬಂದ ಕೂಡಲೇ ಆರೋಪಿಗಳನ್ನು ಬಂಧಿಸಿಸಲಾಗಿದ್ದು ಅವರನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇಬ್ಬರನ್ನೂ ಅಮಾನತಿನಲ್ಲಿರಿಸಲಾಗಿದ್ದು, ಘಟನೆಗೆ ಸಂಬಂಧಿಸಿ ತನಿಖೆಗೆ ಆದೇಶಿಸಲಾಗಿದೆ’’ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಅತ್ಯಾಚಾರ ಘಟನೆಯು ಪಶ್ಚಿಮಬಂಗಾಳದ ಆಡಳಿತಾರೂಢ ಟಿಎಂಸಿ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ವಾಕ್ಸಮರದ ಕಿಡಿ ಹೊತ್ತಿಸಿದೆ. ಬಿಎಸ್ಎಫ್ ನ ಕಾರ್ಯವ್ಯಾಪ್ತಿಯನ್ನು ಅಂತಾರಾಷ್ಟ್ರೀಯ ಗಡಿಯಿಂದ 15 ಕಿ.ಮೀ.ವರೆಗೆ ಇದ್ದುದು, 50 ಕಿ.ಮೀ.ಗೆ ವಿಸ್ತರಿಸಿರುವ ಕೇಂದ್ರ ನಿರ್ಧಾರಕ್ಕೆ ಅವರು ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

‘‘ ಬಿಜೆಪಿಯ ದುರಾಡಳಿತದಿಂದಾಗಿ ನಮ್ಮ ದೇಶವು ಮಹಿಳೆಯರು ಇನ್ನೂ ಹೆಚ್ಚು ಅಸುರಕ್ಷಿತವಾಗಿದೆ ಬಿಎಸ್ಎಫ್ ನ ಅಧಿಕಾರಿ ಹಾಗೂ ಯೋಧನೊಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಒಂದು ವೇಳೆ ಧ್ವನಿಯೆತ್ತಿದ್ದಲ್ಲಿ ಗಂಭೀರ ಪರಿಣಾಮವಾಗಲಿದೆಯೆಂದು ಆಕೆಗೆ ಬೆದರಿಕೆ ಹಾಕಿದ್ದಾನೆ. ಖಂಡಿತವಾಗಿಯೂ ಇದು ‘ಆತ್ಮನಿರ್ಭರ ಭಾರತ’ ದ ಉಜ್ವಲ ಉದಾಹರಣೆಯಾಗಿದೆ ಎಂದು ಟಿಎಂಸಿ ಟ್ವೀಟ್ ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ವಕ್ತಾರ ಶಮಿಕ್ ಭಟ್ಟಾಚಾರ್ಯ ಅವರು, ಇಂತಹ ಕೆಲವು ವಿರಳ ಘಟನೆಗಳಿಗಾಗಿ ಇಡೀ ಪಡೆಯ ತತವರ್ಚಸ್ಸಿಗೆ ಟಿಎಂಸಿ ಕಳಂಕ ಹಚ್ಚಬಾರದು. ಯಾರಾದರೂ ಇಂತಹ ಅಪರಾಧವನ್ನು ಎಸಗಿದ್ದರೆ ಅವರನ್ನು ಕಾನೂನು ಪ್ರಕಾರ ಶಿಕ್ಷಿಸಲಾಗುತ್ತದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News