ಏಶ್ಯಕಪ್: ಶ್ರೀಲಂಕಾವನ್ನು ಮಣಿಸಿದ ಅಫ್ಘಾನಿಸ್ತಾನ ಶುಭಾರಂಭ
ದುಬೈ, ಆ.27: ಏಶ್ಯಕಪ್‌ನ (Asia cup) ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಹೀನಾಯವಾಗಿ ಸೋಲಿಸಿದ ಅಫ್ಘಾನಿಸ್ತಾನ ತಂಡ ಶುಭಾರಂಭ ಮಾಡಿದೆ.
ಶನಿವಾರ ನಡೆದ ‘ಬಿ‘ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡ ಲಂಕಾವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ಎಡಗೈ ವೇಗದ ಬೌಲರ್ ಫಾರೂಕಿ (3-11)ನೇತೃತ್ವದ ಕರಾರುವಾಕ್ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ 19.4 ಓವರ್‌ಗಳಲ್ಲಿ ಕೇವಲ 105 ರನ್‌ಗೆ ಆಲೌಟಾಯಿತು.
ಲಂಕೆಯ ಪರ ಭಾನುಕಾ ರಾಜಪಕ್ಸ(38 ರನ್, 29 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಚಮಿಕಾ ಕರುಣರತ್ನೆ (31 ರನ್,38 ಎಸೆತ)ಹಾಗೂ ದನುಷ್ಕ ಗುಣತಿಲಕ(17 ರನ್)ಎರಡಂಕೆ ಸ್ಕೋರ್ ಗಳಿಸಿದರು.
ಅಫ್ಘಾನ್ ಪರ ನಾಯಕ ಮುಹಮ್ಮದ್ ನಬಿ(2-14) ಹಾಗೂ ಮುಜೀಬ್‌ವುರ್ರಹ್ಮಾನ್(2-24) ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ಗೆಲ್ಲಲು 106 ರನ್ ಗುರಿ ಬೆನ್ನಟ್ಟಿದ ಅಫ್ಘಾನ್ 10.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಗುರಿ ತಲುಪಿತು. ತಂಡದ ಪರ ಮೊದಲ ವಿಕೆಟಿಗೆ 83 ರನ್ ಜೊತೆಯಾಟ ನಡೆಸಿದ ಹಝ್ರತುಲ್ಲಾ ಝಝೈ(ಔಟಾಗದೆ 37 ರನ್, 28 ಎಸೆತ, 5 ಬೌಂ., 1 ಸಿ.) ಹಾಗೂ ರಹಮಾನುಲ್ಲಾ ಗುರ್ಬಝ್(40 ರನ್,18 ಎಸೆತ,3 ಬೌಂ., 4 ಸಿ.)ಭದ್ರ ಬುನಾದಿ ಹಾಕಿಕೊಟ್ಟರು.