ನೀರಿನಿಂದ ಇಂಧನ ತಯಾರಿಸುವ ಕೃತಕ ಎಲೆ

Update: 2022-08-27 19:30 GMT

ವರ್ಷದಿಂದ ವರ್ಷಕ್ಕೆ ಇಂಧನ ಬಿಕ್ಕಟ್ಟು ಹೆಚ್ಚುತ್ತಲೇ ಇದೆ. ಇದಕ್ಕೆ ಕಾರಣಗಳು ಅನೇಕ. ಬರಿದಾಗುತ್ತಿರುವ ಪಳೆಯುಳಿಕೆ ಇಂಧನಗಳು, ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಕೈಗಾರಿಕೆ ಹಾಗೂ ಇನ್ನಿತರ ಯಂತ್ರಾಧಾರಿತ ಚಟುವಟಿಕೆಗಳಿಗೆ ಇಂಧನಗಳ ಅಗತ್ಯತೆ ಮುಂತಾದವುಗಳು. ದಿನದಿಂದ ದಿನಕ್ಕೆ ಇಂಧನದ ಬೇಡಿಕೆ ಹೆಚ್ಚುತ್ತಲೇ ಇದೆ. ಆದರೆ ಪೂರೈಕೆ ಮಾತ್ರ ಆಮೆಗತಿಯಲ್ಲಿದೆ. ಹಾಗಾಗಿ ಇಂಧನದ ದರಗಳು ಏರುತ್ತಲೇ ಇವೆ. ಈ ಸಮಸ್ಯೆ ನಿವಾರಣೆಗಾಗಿ ಪರ್ಯಾಯ ಇಂಧನಗಳ ಸಂಶೋಧನೆ ಮತ್ತು ಬಳಕೆ ನಡೆಯುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಗಾಳಿ ಮತ್ತು ಸೌರಶಕ್ತಿಯಂತಹ ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳು ಗಮನಾರ್ಹವಾಗಿ ಅಗ್ಗವಾಗಿವೆ ಮತ್ತು ಹೆಚ್ಚು ಲಭ್ಯವಿವೆ. ಆದಾಗ್ಯೂ, ಹಡಗಿನಂತಹ ಕೈಗಾರಿಕೆಗಳಿಗೆ, ಡಿಕಾರ್ಬೊನೈಸೇಶನ್ ಹೆಚ್ಚು ವೆಚ್ಚದಾಯಕ ಕ್ರಮವಾಗಿದೆ. ಜಾಗತಿಕ ವ್ಯಾಪಾರದ ಸುಮಾರು ಶೇ. 80 ಪಳೆಯುಳಿಕೆ ಇಂಧನಗಳಿಂದ ಚಾಲಿತ ಸರಕು ಹಡಗುಗಳಿಂದ ಸಾಗಿಸಲ್ಪಡುತ್ತದೆ. ಪರ್ಯಾಯ ಇಂಧನಗಳ ಕುರಿತು ಅನೇಕ ಚರ್ಚೆ, ಕಾರ್ಯತಂತ್ರಗಳು ನಡೆಯುತ್ತಲೇ ಇವೆ. ಜೈವಿಕ ಇಂಧನ ತಯಾರಿಸಿದ್ದಾಯಿತು ಮತ್ತು ಅದು ಹೆಚ್ಚು ಜನಪ್ರಿಯಗೊಳ್ಳದೆ ಮೂಲೆಗುಂಪಾಗಿದ್ದು ಆಯಿತು. ನವೀಕರಿಸಬಹುದಾದ ಇಂಧನ ತಯಾರಿಕೆಯು ಅವ್ಯಾಹತವಾಗಿ ನಡೆದೇ ಇದೆ. ಅದರಲ್ಲಿ ಸೌರ ಇಂಧನ ಮತ್ತು ಪವನ ಇಂಧನಗಳ ಪಾಲು ಹೆಚ್ಚಿನದ್ದಾಗಿದೆ. ಸೌರ ಇಂಧನ ತಂತ್ರಜ್ಞಾನಗಳನ್ನು ಒಳಗೊಂಡಂತೆ ಅನೇಕ ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳು ದೊಡ್ಡ ಪ್ರಮಾಣದ ಜಾಗವನ್ನು ಆವರಿಸಿಕೊಳ್ಳುತ್ತಿವೆ. ಈಗಿರುವ ಸೌರಘಟಕಗಳನ್ನು ಗಮನಿಸಿದರೆ, ಬಹುತೇಕ ಕೃಷಿ ಜಮೀನು ಸೌರ ಘಟಕವಾಗಿ ಪರಿವರ್ತನೆಯಾಗಿರುವುದು ಶೋಚನೀಯ. ಹೀಗೆ ಇದೇ ಪರಿಸ್ಥಿತಿ ಮುಂದುವರಿದರೆ ಇರುವ ಅಲ್ಪ ಪ್ರಮಾಣದ ಕೃಷಿ ಭೂಮಿಯೂ ಸೌರ ಘಟಕಗಳಾಗಿ ಮಾರ್ಪಾಟಾದರೆ ಆಹಾರದ ಬೆಳೆಗಳ ಗತಿಯೇನು? ಎಂಬ ಪ್ರಶ್ನೆ ಕಾಡದೇ ಇರದು. ಇಂತಹ ಅಭಿವೃದ್ಧಿ ಮೂಲದ ಪ್ರಶ್ನೆಗಳು ಎದುರಾದಾಗ ಅವುಗಳನ್ನು ಪರಿಹರಿಸುವ ಸಲುವಾಗಿ ಅನೇಕ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಸಂಶೋಧನೆಯ ಭಾಗವಾಗಿ ನೀರಿನಿಂದ ಇಂಧನ ಉತ್ಪಾದಿಸುವ ಪ್ರಯೋಗ ಯಶಸ್ವಿಯಾಗಿದೆ.

 ನೀರಿನಿಂದ ಇಂಧನ ಉತ್ಪಾದನೆ ಎಂದ ಕೂಡಲೇ ನಮಗೆಲ್ಲಾ ಅಚ್ಚರಿಯಾಗುತ್ತದೆ. ಹೌದು ಹೊಸ ಸಂಶೋಧನೆಗಳು ಯಾವಾಗಲೂ ಅಚ್ಚರಿಯಾಗಿಯೇ ಇರುತ್ತವೆ. ಇಂಧನ ಉತ್ಪಾದಿಸಲು ಸಂಶೋಧಕರು ಕೃತಕ ಎಲೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಕೃತಕ ಎಲೆಗಳು ದ್ಯುತಿಸಂಶ್ಲೇಷಣೆಯಂತೆ ಸೂರ್ಯನ ಬೆಳಕು ಬಳಸಿಕೊಂಡು ನೀರಿನಿಂದ ಶುದ್ಧ ಇಂಧನ ಉತ್ಪಾದಿಸುತ್ತವೆ. ಕೇಂಬ್ರಿಡ್ಜ್‌ನಲ್ಲಿರುವ ಪ್ರೊಫೆಸರ್ ಎರ್ವಿನ್ ರೈಸ್ನರ್ ಹಾಗೂ ಅವರ ತಂಡದವರು ದ್ಯುತಿಸಂಶ್ಲೇಷಣೆಯಿಂದ ಸ್ಫೂರ್ತಿ ಪಡೆದು ಕೃತಕ ಎಲೆಯ ಮೂಲಕ ಇಂಧನ ತಯಾರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಂಶೋಧನಾ ತಂಡವು ದ್ಯುತಿಸಂಶ್ಲೇಷಣೆಯ ತತ್ವಗಳ ಆಧಾರದ ಮೇಲೆ ಗ್ಯಾಸೋಲಿನ್‌ಗೆ ಸಮರ್ಥನೀಯ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದೆ. ಅವರು 2019ರಲ್ಲಿ ಕೃತಕ ಎಲೆಯನ್ನು ಅಭಿವೃದ್ಧಿಪಡಿಸಿದ್ದರು. ಇದು ಸೂರ್ಯನ ಬೆಳಕು, ಇಂಗಾಲದ ಡೈಆಕ್ಸೈಡ್ ಮತ್ತು ನೀರಿನಿಂದ ಸಿಂಗಾಗಳನ್ನು ತಯಾರಿಸುತ್ತದೆ. ಅನೇಕ ರಾಸಾಯನಿಕಗಳು ಮತ್ತು ಔಷಧಗಳ ಉತ್ಪಾದನೆಯಲ್ಲಿ ಸಿಂಗಾಗಳು ಪ್ರಮುಖ ಮಧ್ಯಂತರವಾಗಿದೆ.

ಕೃತಕ ಎಲೆಗಾಗಿ ತೆಳುವಾದ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವಂತಹ ಸಾಧನಗಳನ್ನು ಬಳಸಿಕೊಂಡಿದ್ದಾರೆ. ಕಡಿಮೆ ವೆಚ್ಚದ, ಸ್ವಾಯತ್ತ ಸಾಧನಗಳು ತೇಲುವಷ್ಟು ಹಗುರವಾಗಿರುವುದರಿಂದ, ಭೂಮಿಯಲ್ಲಿ ಜಾಗವನ್ನು ತೆಗೆದುಕೊಳ್ಳದೆಯೇ ಗ್ಯಾಸೋಲಿನ್‌ಗೆ ಸುಸ್ಥಿರ ಪರ್ಯಾಯವನ್ನು ಉತ್ಪಾದಿಸಲು ಅವುಗಳನ್ನು ಬಳಸಬಹುದು ಎಂದು ಸಾಬೀತುಪಡಿಸಿದ್ದಾರೆ. ಕೃತಕ ಎಲೆಯಿಂದ ಇಂಧನ ಉತ್ಪಾದಿಸುವ ಪ್ರಯೋಗಕ್ಕಾಗಿ ತಂಡವು ಕೇಂಬ್ರಿಡ್ಜ್ ವಿ.ವಿ.ಮೂಲಕ ಹಾದುಹೋಗಿರುವ ಕ್ಯಾಮ್ ನದಿಯನ್ನೇ ಬಳಸಿಕೊಂಡರು. ಮೊದಲ ಪ್ರಯತ್ನದಲ್ಲಿ ಸಫಲರಾದರು. ಕ್ಯಾಮ್ ನದಿಯ ಮೇಲಿನ ಹಗುರವಾದ ಎಲೆಗಳ ಹೊರಾಂಗಣ ಪರೀಕ್ಷೆಗಳು ಸೂರ್ಯನ ಬೆಳಕನ್ನು ಸಸ್ಯದ ಎಲೆಗಳಂತೆ ಪರಿಣಾಮಕಾರಿಯಾಗಿ ಇಂಧನಗಳಾಗಿ ಪರಿವರ್ತಿಸಬಹುದು ಎಂದು ತೋರಿಸಿದೆ. ನಂತರ ಇಂಗ್ಲೆಂಡ್‌ನ ಬ್ರಿಡ್ಜ್ ಆಫ್ ಸಿಗ್ಸ್, ರೆನ್ ಲೈಬ್ರರಿ ಮತ್ತು ಕಿಂಗ್ಸ್ ಕಾಲೇಜ್ ಚಾಪೆಲ್ ಸೇರಿದಂತೆ ಸಾಂಪ್ರದಾಯಿಕ ಕೇಂಬ್ರಿಡ್ಜ್ ಸೈಟ್‌ಗಳ ಬಳಿ ಪರೀಕ್ಷೆ ನಡೆಸಿ ಯಶಸ್ವಿಯಾಗಿದ್ದಾರೆ. ಎಲೆಯು ಪ್ರಕೃತಿಯ ಅತ್ಯಂತ ಪ್ರಭಾವಶಾಲಿ ಸಣ್ಣ ಯಂತ್ರಗಳಲ್ಲಿ ಒಂದಾಗಿದೆ. ಸೂರ್ಯನ ಬೆಳಕು, ಇಂಗಾಲದ ಡೈಆಕ್ಸೈಡ್ ಮತ್ತು ನೀರನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ. ಇದೇ ತತ್ವದ ಆಧಾರದ ಮೇಲೆ ಕೇಂಬ್ರಿಡ್ಜ್‌ನ ವಿಜ್ಞಾನಿಗಳು ಕೃತಕ ಎಲೆಯನ್ನು ರಚಿಸಿದ್ದಾರೆ. ಅದು ನೀರಿನ ಮೇಲೆ ತೇಲುತ್ತಾ, ಮೇಲ್ಭಾಗದಿಂದ ಸೂರ್ಯನ ಬೆಳಕನ್ನು ಹೀರಿಕೊಂಡು, ಕೆಳಭಾಗದಿಂದ ನೀರನ್ನು ಬಳಸಿಕೊಂಡು ನೈಜ ರೀತಿಯಲ್ಲಿಯೇ ಪರಿಣಾಮಕಾರಿಯಾಗಿ ಇಂಧನವನ್ನು ಉತ್ಪಾದಿಸುತ್ತದೆ.

ಕೃತಕ ಎಲೆಗಾಗಿ ಕೋಬಾಲ್ಟ್ ವೇಗವರ್ಧಕದೊಂದಿಗೆ ಜೋಡಿಸಲಾದ ಎರಡು ಪೆರೋವ್‌ಸ್ಕೈಟ್ ಲೈಟ್ ಅಬ್ಸಾರ್ಬರ್‌ಗಳನ್ನು ಬಳಸಿದ ತಂಡವು ಹಿಂದಿನ ವಿನ್ಯಾಸವನ್ನೇ ಪುನಃ ಬಳಸಿದೆ. ಆಮ್ಲಜನಕ, ಹೈಡ್ರೋಜನ್ ಮತ್ತು ಕಾರ್ಬನ್ ಮಾನಾಕ್ಸೈಡ್‌ಗಳನ್ನು ಪ್ರತ್ಯೇಕಿಸಲು ನೀರು ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಬಳಸಿಕೊಳ್ಳುತ್ತದೆ. ಪ್ಲಾಸ್ಟಿಕ್‌ಗಳು, ರಸಗೊಬ್ಬರಗಳು ಮತ್ತು ಡೀಸೆಲ್‌ನಂತಹ ಇಂಧನಗಳಲ್ಲಿ ಪ್ರಮುಖ ಘಟಕಾಂಶವಾದ ಸಿಂಥೆಟಿಕ್ ಗ್ಯಾಸ್ (ಸಿಂಗಾಸ್) ತಯಾರಿಸಲು ಬಳಸಬಹುದು. ಮೂಲಭೂತವಾಗಿ ಈ ಉತ್ಪನ್ನಗಳು ಇಂಗಾಲದ ಡೈ ಆಕ್ಸೈಡ್ ಹೆಜ್ಜೆಗುರುತನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂದು ತಂಡವು ಹೇಳಿದೆ.

ಹಿಂದಿನ ಮೂಲ ಮಾದರಿಯು ಎರಡು ಬೆಳಕಿನ ಅಬ್ಸಾರ್ಬರ್‌ಗಳನ್ನು ಸೂಕ್ತವಾದ ವೇಗವರ್ಧಕಗಳೊಂದಿಗೆ ಸಂಯೋಜಿಸುವ ಮೂಲಕ ಇಂಧನವನ್ನು ಉತ್ಪಾದಿಸಿತು. ಆದಾಗ್ಯೂ ಇದು ದಪ್ಪಗಾಜಿನ ತಲಾಧಾರಗಳು ಮತ್ತು ತೇವಾಂಶ ರಕ್ಷಣಾತ್ಮಕ ಲೇಪನಗಳನ್ನು ಸಂಯೋಜಿಸಿತು. ಕೃತಕ ಎಲೆಗಳು ಸುಸ್ಥಿರ ಇಂಧನ ಉತ್ಪಾದನೆಯ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಆದರೆ ಅವುಗಳು ಭಾರ ಮತ್ತು ದುರ್ಬಲವಾದವುಗಳು ಆಗಿರುವುದರಿಂದ, ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮತ್ತು ಸಾರಿಗೆಯಲ್ಲಿ ಬಳಸಲು ಕಷ್ಟವಾಗುತ್ತದೆ ಎಂದು ಈ ಸಂಶೋಧನಾ ತಂಡದ ಸದಸ್ಯರು ಹಾಗೂ ಕೇಂಬ್ರಿಡ್ಜ್‌ನ ಯೂಸುಫ್ ಹಮೀದ್ ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥ ಡಾ. ವರ್ಜಿಲ್ ಆಂಡ್ರೇ ಹೇಳಿದರು. ತೇಲುವಷ್ಟು ಹಗುರವಾದ ವಸ್ತುಗಳನ್ನು ಬಳಸಲು ಸಾಧ್ಯವಾದರೆ, ಈ ಕೃತಕ ಎಲೆಗಳನ್ನು ಸಂಪೂರ್ಣವಾಗಿ ಎಲ್ಲಾ ಹೊಸ ಜಲ ಮಾರ್ಗಗಳಲ್ಲಿ ಬಳಸಬಹುದು ಎಂದು ಸಂಶೋಧನೆಯ ನೇತೃತ್ವ ವಹಿಸಿದ ಎರ್ವಿನ್ ರೈಸ್ನರ್ ಹೇಳುತ್ತಾರೆ. ಕೃತಕ ಎಲೆಯ ಹೊಸ ಆವೃತ್ತಿಗಾಗಿ, ವಿಜ್ಞಾನಿಗಳು ಇಲೆಕ್ಟ್ರಾನಿಕ್ಸ್ ಉದ್ಯಮದಿಂದಲೂ ಸ್ಫೂರ್ತಿ ಪಡೆದಿದ್ದಾರೆ. ಮಿನಿಯೇಟರೈಸೇಶನ್ ತಂತ್ರಗಳು ಸ್ಮಾರ್ಟ್‌ಫೋನ್‌ಗಳು ಮತ್ತು ಹೊಂದಿಕೊಳ್ಳುವ ಡಿಸ್‌ಪ್ಲೇಗಳ ಸೃಷ್ಟಿಗೆ ಕಾರಣವಾಗಿವೆ. ಮಿನಿಯೇಟರೈಸೇಶನ್ ತಂತ್ರಗಳು ಪ್ರಸ್ತುತ ತಾಂತ್ರಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟುಮಾಡಿವೆ.
 
ಹಗುರವಾದ ತಲಾಧಾರಗಳ ಮೇಲೆ ಬೆಳಕಿನ ಹೀರಿಕೊಳ್ಳುವಿಕೆಯನ್ನು ಸಂಗ್ರಹ ಮಾಡುವುದು ಮತ್ತು ನೀರಿನ ಒಳನುಸುಳುವಿಕೆಯಿಂದ ಅವುಗಳನ್ನು ಹೇಗೆ ರಕ್ಷಿಸುವುದು ಎಂಬುದು ಕೇಂಬ್ರಿಡ್ಜ್ ಸಂಶೋಧನಾ ತಂಡಕ್ಕೆ ಸವಾಲಾಗಿತ್ತು. ಈ ಸವಾಲುಗಳನ್ನು ಜಯಿಸಲು ಸಂಶೋಧಕರು ತೆಳುವಾದ ಫಿಲ್ಮ್ ಮೆಟಲ್ ಆಕ್ಸೈಡ್‌ಗಳನ್ನು ಮತ್ತು ಪೆರೋವ್‌ಸ್ಕೈಟ್‌ಗಳು ಎಂದು ಕರೆಯಲ್ಪಡುವ ವಸ್ತುಗಳನ್ನು ಬಳಸಿದ್ದಾರೆ. ಇದರ ಮೇಲೆ ತೆಳುವಾದ ಪ್ಲಾಸ್ಟಿಕ್ ಮತ್ತು ಲೋಹದ ಹಾಳೆಗಳ ಮೇಲೆ ಲೇಪಿಸಲಾಗಿತ್ತು. ಸಾಧನಗಳನ್ನು ಮೈಕ್ರೊಮೀಟರ್‌ನಷ್ಟು ತೆಳುವಾದ, ನೀರು ನಿವಾರಕ ಕಾರ್ಬನ್ ಆಧಾರಿತ ಪದರಗಳಿಂದ ಮುಚ್ಚಲಾಯಿತು. ಅದು ತೇವಾಂಶದ ಒಳನುಸುಳುವಿಕೆಯನ್ನು ತಡೆಯುತ್ತದೆ. ನೋಡಲು ನಿಜವಾದ ಎಲೆಯಂತಿರುವ ಈ ಕೃತಕ ಎಲೆಯು ನೀರಿನ ಮೇಲೆ ತೇಲುತ್ತಾ ಇಂಧನ ತಯಾರಿಸುವಲ್ಲಿ ಯಶಸ್ವಿಯಾಗಿದೆ. ಕೃತಕ ಎಲೆಗಳು ಆಧುನಿಕ ಫ್ಯಾಬ್ರಿಕೇಶನ್ ತಂತ್ರಗಳೊಂದಿಗೆ ಹೊಂದಿಕೊಳ್ಳುತ್ತವೆ ಎಂದು ಈ ಅಧ್ಯಯನವು ತೋರಿಸಿದೆ. ಇದು ಸೌರ ಇಂಧನ ಉತ್ಪಾದನೆಯ ಯಾಂತ್ರೀಕೃತಗೊಂಡ ಮತ್ತು ಉನ್ನತ ಸ್ಕೇಲಿಂಗ್ ಕಡೆಗೆ ಆರಂಭಿಕ ಹಂತವನ್ನು ಪ್ರತಿನಿಧಿಸುತ್ತದೆ. ಈ ಎಲೆಗಳು ಹೆಚ್ಚಿನ ಸೌರ ಇಂಧನ ತಂತ್ರಜ್ಞಾನಗಳ ಅನುಕೂಲಗಳನ್ನು ಸಂಯೋಜಿಸುತ್ತವೆ. ಏಕೆಂದರೆ ಅವು ಕಡಿಮೆ ತೂಕದ ಸಂಕೀರ್ಣ ವ್ಯವಸ್ಥೆಗಳ ಹೆಚ್ಚಿನ ಕಾರ್ಯಕ್ಷಮತೆಯನ್ನು ಸಾಧಿಸುತ್ತವೆ.

ಕೃತಕ ಎಲೆಗಳ ಪರೀಕ್ಷೆಗಳು ನೀರನ್ನು ಹೈಡ್ರೋಜನ್ ಮತ್ತು ಆಮ್ಲಜನಕವಾಗಿ ವಿಭಜಿಸಬಹುದು ಅಥವಾ ಇಂಗಾಲದ ಡೈ ಆಕ್ಸೈಡನ್ನು ಸಿಂಗಾಸ್‌ಗೆ ತಗ್ಗಿಸಬಹುದು ಎಂದು ತೋರಿಸಿವೆ. ವಾಣಿಜ್ಯ ಅನ್ವಯಿಕೆಗಳಿಗೆ ಸಿದ್ಧವಾಗುವ ಮೊದಲು ಹೆಚ್ಚುವರಿ ಸುಧಾರಣೆಗಳನ್ನು ಮಾಡಬೇಕಾಗಿದ್ದರೂ, ಈ ಬೆಳವಣಿಗೆಯು ತಮ್ಮ ಕೆಲಸದಲ್ಲಿ ಸಂಪೂರ್ಣ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೌರ ಫಾರ್ಮ್‌ಗಳು ವಿದ್ಯುತ್ ಉತ್ಪಾದನೆಗೆ ಜನಪ್ರಿಯವಾದಂತೆ ಇಂಧನ ಸಂಶ್ಲೇಷಣೆಗಾಗಿ ನಾವು ಇದೇ ರೀತಿಯ ಕೃತಕ ಎಲೆ ಫಾರ್ಮ್‌ಗಳನ್ನು ರೂಪಿಸುತ್ತೇವೆ ಎಂದು ಸಂಶೋಧನಾ ತಂಡ ಹೇಳಿದೆ. ಒಂದು ವೇಳೆ ತಂಡದ ಪ್ರಯತ್ನಗಳು ಯಶಸ್ವಿಯಾದರೆ ಸಮುದ್ರಗಳು ಸೇರಿದಂತೆ ಕರಾವಳಿ ಪ್ರದೇಶಗಳು, ಕಾಲುವೆಗಳು, ಸರೋವರಗಳು ಹಾಗೂ ಇನ್ನಿತರ ವಿಸ್ತಾರವಾದ ಜಲಮೂಲಗಳಲ್ಲಿ ಕೃತಕ ಎಲೆಗಳಿಂದ ಇಂಧನ ಉತ್ಪಾದಿಸಲು ಸಾಕಷ್ಟು ಅವಕಾಶಗಳಿವೆ. ಅಲ್ಲದೆ ಇಂತಹ ಜಲಮೂಲಗಳಿಂದ ಜಲಮಾಲಿನ್ಯವನ್ನು ತಗ್ಗಿಸಲು ಅವಕಾಶ ದೊರೆಯಲೂಬಹುದು. ನೀರಿನಲ್ಲಿ ಶುದ್ಧ ಇಂಧನವನ್ನು ಉತ್ಪಾದಿಸುತ್ತಿರುವುದು ಇದೇ ಮೊದಲು. ಈ ಸಂಶೋಧನೆಯನ್ನು ಎಲ್ಲೆಡೆ ಬಳಸುವಂತಾದರೆ, ಕಲುಷಿತ ಜಲಮಾರ್ಗಗಳಲ್ಲಿ, ಬಂದರುಗಳಲ್ಲಿ ಅಥವಾ ಸಮುದ್ರದಲ್ಲಿಯೂ ಬಳಸಬಹುದು. ಪಳೆಯುಳಿಕೆ ಇಂಧನಗಳ ಮೇಲೆ ಜಾಗತಿಕ ಹಡಗು ಉದ್ಯಮದ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಶೋಧನೆಯನ್ನು ಯುರೋಪಿಯನ್ ರಿಸರ್ಚ್ ಕೌನ್ಸಿಲ್, ಕೇಂಬ್ರಿಡ್ಜ್ ಟ್ರಸ್ಟ್, ವಿಂಟನ್ ಪ್ರೋಗ್ರಾಂ ಫಾರ್ ದಿ ಫಿಸಿಕ್ಸ್ ಆಫ್ ಸಸ್ಟೈನಬಿಲಿಟಿ, ರಾಯಲ್ ಅಕಾಡಮಿ ಆಫ್ ಇಂಜಿನಿಯರಿಂಗ್, ಮತ್ತು ಇಂಜಿನಿಯರಿಂಗ್ ಆ್ಯಂಡ್ ಫಿಸಿಕಲ್ ಸೈನ್ಸಸ್ ರಿಸರ್ಚ್ ಕೌನ್ಸಿಲ್‌ಗಳು ಬೆಂಬಲಿಸಿವೆ.

Writer - ಆರ್.ಬಿ.ಗುರುಬಸವರಾಜ

contributor

Editor - ಆರ್.ಬಿ.ಗುರುಬಸವರಾಜ

contributor

Similar News