ಜನಪರ ಚರ್ಚೆ-ಸಂವಾದಗಳು ಎಲ್ಲೆಲ್ಲೂ ಮೆರೆಯಲಿ

Update: 2022-08-29 06:18 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನಿಮ್ಮ ‘ವಾರ್ತಾಭಾರತಿ’ ಮಾಧ್ಯಮ ಬಳಗವು ಇಂದು 20ನೇ ವರ್ಷವನ್ನು ಪ್ರವೇಶಿಸುತ್ತಿದೆ. ಈ ಪ್ರಯಾಣದ ವಿವಿಧ ಮಜಲುಗಳಲ್ಲಿ ನಮಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡಿದ ನಮ್ಮೆಲ್ಲಾ ಓದುಗರು, ವೀಕ್ಷಕರು, ಶ್ರೋತೃಗಳು, ಹಿತೈಷಿಗಳು ಮತ್ತು ಸಕ್ರಿಯವಾಗಿ ಸಹಕರಿಸಿದ ಎಲ್ಲ ಆಪ್ತರಿಗೆ ಹೃರ್ತ್ಪೂವಕ ಕೃತಜ್ಞತೆಗಳು. ತೀರಾ ಪ್ರತಿಕೂಲ ವಾತಾವರಣದಲ್ಲೂ ಅಂಜದೆ, ಅಳುಕದೆ, ರಾಜಿಗಿಳಿಯದೆ, ಆಮಿಷಗಳಿಗೆ ಕೈ ಒಡ್ಡದೆ, ಒಬ್ಬರನ್ನೊಬ್ಬರು ತಿದ್ದುತ್ತಾ, ಪರಸ್ಪರರಿಗೆ ಪ್ರೇರಣೆ ನೀಡುತ್ತಾ ಗುರಿಯೆಡೆಗೆ ದಿಟ್ಟವಾಗಿ ಮುನ್ನಡೆದ ನಮ್ಮ ತಂಡದ ಸರ್ವ ಸದಸ್ಯರಿಗೂ ಮನದಾಳದ ಅಭಿನಂದನೆಗಳು. ಗೆದ್ದವರಿಗಿಂತ ಹೆಚ್ಚಾಗಿ ಸೋತವರು, ಸೋಲಿಗೆ ಅಂಜಿ ರಂಗದಿಂದ ದೂರ ಉಳಿದವರು ಮತ್ತು ಮುನ್ನಡೆಯುವವರನ್ನು ಸೋಲಿಸಲು ಹೆಣಗಾಡುವವರು ಹೆಜ್ಜೆಹೆಜ್ಜೆಗೂ ಕಾಣ ಸಿಗುವ ಈ ಪ್ರಯಾಣದಲ್ಲಿ ಸರಿ ದಿಕ್ಕಿನಲ್ಲಿ ಒಂದು ಹೆಜ್ಜೆ ಮುಂದಿಡಲು ಸಾಧ್ಯವಾದರೂ ಅದೊಂದು ಗಣ್ಯ ಸಾಧನೆ.

 ಮಾಧ್ಯಮರಂಗದಲ್ಲಿನ ಪಕ್ಷಪಾತಿ, ಭಟ್ಟಂಗಿ ಮತ್ತು ರಾಜಿ ನೀತಿಗಳ ವಿರುದ್ಧ ಬಂಡಾಯದ ರೂಪದಲ್ಲಿ, ಪರ್ಯಾಯ ಧೋರಣೆಗಳೊಂದಿಗೆ ರಂಗಕ್ಕೆ ಬಂದ ಮಾಧ್ಯಮ ನಮ್ಮದು. ಬೇರೆ ಅನೇಕ ಉದ್ಯಮಗಳಂತೆ ಬೃಹತ್ ಬಂಡವಾಳ, ರಾಜಕೀಯ ಆಶ್ರಯ ಮತ್ತು ಪದೇ ಪದೇ ರಂಗು ಬದಲಾಯಿಸುವ ಸಾಮರ್ಥ್ಯವನ್ನೇ ಅವಲಂಬಿಸಿರುವ ಈ ರಂಗದಲ್ಲಿ ಆದರ್ಶ, ಕನಸುಗಳು ಮತ್ತು ಖಯಾಲಿಗಳ ಹೊರೆ ಹೊತ್ತು ಬಂದ ಎಷ್ಟೋ ಮಂದಿ ಒಂದೋ ಕ್ಷಿಪ್ರವಾಗಿ ಬದಲಾಗಿದ್ದಾರೆ ಅಥವಾ ಸದ್ದಿಲ್ಲದೆ ಕಣ್ಮರೆಯಾಗಿದ್ದಾರೆ. ಅದೆಷ್ಟೋ ಪಕ್ಷ, ಸಂಘಟನೆಗಳಿಗೂ ತಮ್ಮ ಮುಖವಾಣಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂತಹ ಕಠಿಣ ರಂಗದಲ್ಲಿ ನಮ್ಮೆಲ್ಲ ಇತಿಮಿತಿಗಳ ಹೊರತಾಗಿಯೂ ನಮ್ಮ ಸ್ವಾತಂತ್ರ ಮತ್ತು ಸ್ವಂತಿಕೆಯನ್ನು ಉಳಿಸಿಕೊಂಡು ಘೋಷಿತ ದಿಕ್ಕಿನೆಡೆಗೆ ಮುನ್ನಡೆಯುತ್ತಿದ್ದೇವೆ ಎನ್ನುವುದು ನಮ್ಮ ತಂಡಕ್ಕೆ ಸಂತಸದ ವಿಷಯ. ಮಹಾ ಕ್ರಾಂತಿ ತರುತ್ತೇವೆಂದು ನಾವು ಯಾರಿಗೂ ಭರವಸೆ ನೀಡಿರಲಿಲ್ಲ. ಆದ್ದರಿಂದ ಯಾರದೇ ನಿರಾಶೆಗೆ ನಾವು ಕಾರಣರಾಗಿಲ್ಲ. ಒಂದು ಹೆಜ್ಜೆ ಮುನ್ನಡೆದ ಈ ಸಂತಸದ ಸನ್ನಿವೇಶದಲ್ಲಿ, ಕೆಲವು ಸಮಕಾಲೀನ ವಾಸ್ತವಗಳನ್ನು ಸ್ಮರಿಸಿಕೊಂಡು ಆ ಕುರಿತಾದ ಕಾಳಜಿಯನ್ನು ಮಾಧ್ಯಮ ರಂಗದ ಸಹವರ್ತಿಗಳ ಜೊತೆ ಹಂಚಿಕೊಳ್ಳಬೇಕಾಗಿದೆ. ಮಾಧ್ಯಮವು ಸಂವೇದನಾಶೀಲವಾಗಿದ್ದರೆ ಅದರ ಕೆಲಸ ಕೇವಲ ಮಾಹಿತಿ ತಲುಪಿಸುವುದಕ್ಕೆ ಸೀಮಿತವಾಗಿರುವುದಿಲ್ಲ. ಮಾಹಿತಿಗಳ ಆಧಾರದಲ್ಲಿ ಸಮಾಜವು ಎಂತಹ ನಿಲುವುಗಳನ್ನು ತಾಳುತ್ತದೆ ಮತ್ತು ಮಾಹಿತಿಗಳು ಪರಿವರ್ತನೆಯ ಪ್ರಕ್ರಿಯೆಯಲ್ಲಿ ಯಾವ ಬಗೆಯ ಪಾತ್ರ ನಿರ್ವಹಿಸುತ್ತಿವೆ ಎಂಬುದು ಕೂಡಾ ಮಾಧ್ಯಮಗಳ ಆಸಕ್ತಿ ಮತ್ತು ಚಿಂತೆಗೆ ಯೋಗ್ಯ ವಿಷಯಗಳಾಗಿವೆ.ಒಂದು ಸಮಾಜ ಏನನ್ನು ಚರ್ಚಿಸುತ್ತಿದೆ ಎಂಬುದು ಆಸಮಾಜ ಎಷ್ಟು ಸ್ವಸ್ಥವಾಗಿದೆ ಮತ್ತು ಅದು ಯಾವ ದಿಕ್ಕಿನಲ್ಲಿ ಸಾಗಿದೆ ಎಂಬುದನ್ನು ಸೂಚಿಸುತ್ತದೆ. ಚರ್ಚೆ, ವಾದ, ಸಂವಾದಗಳಿಗೆ ವಸ್ತುವಾಗಲು ಎಲ್ಲ ಅರ್ಹತೆ ಇರುವ ಹಲವು ಜ್ವಲಂತಸಮಸ್ಯೆಗಳು ಮತ್ತು ಸವಾಲುಗಳು ನಮ್ಮ ಸಮಾಜದಲ್ಲಿವೆ. ಆ ಪೈಕಿಎಷ್ಟೋ ಸಮಸ್ಯೆಗಳು ನೇರವಾಗಿ ಸಮಾಜದ ಕ್ಷೇಮಕ್ಕೆ ಮತ್ತು ಕೋಟಿಗಟ್ಟಲೆ ಜೀವಿಗಳ ಅಸ್ತಿತ್ವಕ್ಕೆ ಸಂಬಂಧಿಸಿವೆ.ಆದರೆ ಈ ಸ್ವರೂಪದ ಎಷ್ಟೋ ಗಂಭೀರ ಸಮಸ್ಯೆಗಳು ನಮ್ಮ ಸಮಾಜದಲ್ಲಿ ಎಲ್ಲೂ ಸಾಮೂಹಿಕ ಸ್ತರದಲ್ಲಿ ಚರ್ಚೆಗೆ ಬಾರದೇ ನೇಪಥ್ಯದಲ್ಲೇ ದಫನಗೊಳ್ಳುತ್ತವೆ. ಹಿಂದಿನ ಕಾಲಗಳಲ್ಲಿ ಕುಬೇರರು, ಪುರೋಹಿತರು ಮತ್ತು ಫುಢಾರಿಗಳು ಬಹುಜನ ಹಿತಾಸಕ್ತಿಗೆ ಸಂಬಂಧಿಸಿದ ಎಲ್ಲ ಸಂವಾದಗಳ ಶತ್ರುಗಳಾಗಿದ್ದರು. ಜನಹಿತಕ್ಕೆ ಸಂಬಂಧಿಸಿದ ವಿಷಯಗಳು ಸಮಾಜದಲ್ಲಿ ಚರ್ಚೆಗೆ ಬರದಂತೆ ಈ ಹಳೆಯ ಶತ್ರುಗಳು ಎಲ್ಲ ಏರ್ಪಾಡುಗಳನ್ನೂ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಈಮಹಾ ಪಾತಕದಲ್ಲಿ ಕುಬೇರರು, ಪುರೋಹಿತರು ಮತ್ತು ಪುಢಾರಿಗಳ ಜೊತೆ ಮಾಧ್ಯಮಗಳು ಕೂಡ ಕೈಜೋಡಿಸಿವೆ ಎಂಬುದು, ಒಂದು ಲಜ್ಜಾಸ್ಪದ ವಾಸ್ತವವಾಗಿದೆ.

ಇಂದಾದರೂ ನಮ್ಮ ಮಕ್ಕಳ ಹೊಟ್ಟೆ ತುಂಬಲು ಏನಾದರೂ ಸಿಕ್ಕೀತೇ? - ಈ ಪ್ರಶ್ನೆ ನಮ್ಮಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಸರಳ, ಆದರೆ ಮೂಲಭೂತ ಸ್ವರೂಪದ ಈ ಪ್ರಶ್ನೆ ಭಾರತದ ಕೋಟ್ಯಂತರ ಮನೆಗಳಲ್ಲಿ ನಿತ್ಯ ಮೊಳಗುತ್ತದೆ. ಗುಟ್ಟಾಗಿಯಲ್ಲ, ಜೋರಾಗಿ ಮೊಳಗುತ್ತದೆ. ಒಮ್ಮೆಯಲ್ಲ, ಹಲವು ಬಾರಿ ಮೊಳಗುತ್ತದೆ. ನಮ್ಮ ದೇಶದ ವೈಭವ, ನಮ್ಮ ಸಂವಿಧಾನ, ನಮ್ಮ ಪ್ರಜಾಸತ್ತೆ, ನಮ್ಮ ಸಮಾಜವಾದಿ ಆದರ್ಶ ಇತ್ಯಾದಿ ಎಲ್ಲವನ್ನೂ ಅಣಕಿಸುವ ಇಷ್ಟೊಂದು ಪ್ರಮುಖ ಪ್ರಶ್ನೆ ಎಂದೂ ಮನೆ, ಗುಡಿಸಲುಗಳ ಹೊಸ್ತಿಲು ದಾಟಿ ಯಾಕೆ ಹೊರಬರುವುದಿಲ್ಲ? ಅದು ಸಮಾಜವನ್ನು ತಲುಪಿ ಅಲ್ಲೇಕೆ ಮಾರ್ದನಿಸುವುದಿಲ್ಲ? ಕೋಟಿಗಟ್ಟಲೆ ಮಂದಿ ಖಾಸಗಿಯಾಗಿ ಕೇಳುವ ಈ ಪ್ರಶ್ನೆ ಎಲ್ಲ ಬಡ, ಬಹುಜನ ಭಾರತೀಯರ ಒಕ್ಕೊರಲ ಪ್ರಶ್ನೆಯಾಗಿ ಯಾಕೆ ಬೆಳೆಯುವುದಿಲ್ಲ? ಅದು ಯಾಕೆ ಇನ್ನೂ ನಮ್ಮ ಒಟ್ಟು ಸಮಾಜದ ಚರ್ಚಾ ವಿಷಯವಾಗಿಲ್ಲ? ಜಗತ್ತಿನಲ್ಲಿ, ಪೌಷ್ಟಿಕ ಆಹಾರದ ಕೊರತೆಯಿಂದ ನರಳುತ್ತಿರುವ ಅತ್ಯಧಿಕ ಮಂದಿ ನಮ್ಮ ದೇಶದಲ್ಲಿದ್ದಾರೆ. ಸೂಕ್ತ ಆಹಾರ ಲಭ್ಯವಾಗದ ಕಾರಣ ಇಲ್ಲಿ ಕೋಟ್ಯಂತರ ಪುಟ್ಟ ಮಕ್ಕಳು ಮತ್ತು ಮಹಿಳೆಯರು ವಿವಿಧ ಬಗೆಯ ವೈಕಲ್ಯ ಹಾಗೂ ದೌರ್ಬಲ್ಯಗಳಿಂದ ಬಳಲುತ್ತಿದ್ದಾರೆ. ಆದರೂ ಇದು ನಮ್ಮ ಬೀದಿ, ಕೇರಿಗಳಲ್ಲಿ ಚರ್ಚೆಯ ವಿಷಯವಾಗಿಲ್ಲ ಎಂದರೆ ಏನರ್ಥ? ವಾಸಕ್ಕೆ ಮನೆ ಇಲ್ಲದ ಮೂರು ಕೋಟಿ ಮಂದಿ ದೇಶದಲ್ಲಿದ್ದಾರೆ. ಲಕ್ಷಾಂತರ ಮಂದಿ ಇಲ್ಲಿ ಬದುಕಿಗಾಗಿ ಭಿಕ್ಷೆ ಬೇಡುವುದಕ್ಕೆ ನಿರ್ಬಂಧಿತರಾಗಿದ್ದಾರೆ. ಹಸಿವಿನಿಂದ ವಿವಶರಾಗಿ ಮೈ ಮಾರುವುದನ್ನು ದಂಧೆಯಾಗಿಸಿಕೊಂಡ ಮಹಿಳೆಯರ ಸಂಖ್ಯೆ ಇಲ್ಲಿ ಕೋಟಿಯ ಆಸುಪಾಸಿನಲ್ಲಿದೆ. ಸರಕಾರ ಮತ್ತು ಪುಢಾರಿಗಳು ಭಿಕ್ಷಾಟನೆಯನ್ನು ಮತ್ತು ವೇಶ್ಯಾವೃತ್ತಿಯನ್ನು ನಿಷೇಧಿಸುವ ಕುರಿತು ಮಾತನಾಡುತ್ತಾರೆ. ಆದರೆ ಈ ಅನಿಷ್ಟಗಳಿಗೆ ಮೂಲಕಾರಣವಾದ ದಾರಿದ್ರವನ್ನು ನಿವಾರಿಸುವ ಅಥವಾ ಈ ವಿಷ ವರ್ತುಲದಲ್ಲಿ ಸಿಕ್ಕಿಕೊಂಡವರನ್ನು ಅದರಿಂದ ಹೊರತರುವ ಕುರಿತು ಯಾವುದೇ ಚರ್ಚೆ ಸರಕಾರದ ಸ್ತರದಲ್ಲಾಗಲಿ ಸಮಾಜದಲ್ಲಾಗಲಿ ಏಕೆ ಕೇಳಿ ಬರುವುದಿಲ್ಲ?
ನಾವು ವಿಶ್ವಗುರುಗಳಾಗುತ್ತೇವೆಂಬ ಭವ್ಯ ದೀಕ್ಷೆ ತೊಟ್ಟ ಬಳಿಕ ಕೂಡ ನಮ್ಮಲ್ಲಿ 30 ಕೋಟಿಗೂ ಹೆಚ್ಚು ನಿರಕ್ಷರಿಗಳಿರುವುದೇಕೆ? ಜ್ಞಾನ, ಜಾಗೃತಿ ಇತ್ಯಾದಿಯೆಲ್ಲ ದೂರದ ಮಾತುಗಳು. ನಮ್ಮ ಸಮಾಜದ ಇಷ್ಟೊಂದು ದೊಡ್ಡ ಭಾಗ ಅಕ್ಷರ ಜ್ಞಾನದಿಂದಲೇ ವಂಚಿತವಾಗಿದೆ ಎಂಬ ಕಳಂಕದ ಬಗ್ಗೆ ನಾವೇಕೆ ಚರ್ಚಿಸುತ್ತಿಲ್ಲ? ಈ ಕಳಂಕ ಜನರನ್ನೇಕೆ ಉದ್ರೇಕಿಸುತ್ತಿಲ್ಲ? ಅದು ಜನರನ್ನೇಕೆ ಬೀದಿಗೆ ತರುತ್ತಿಲ್ಲ?
ಮದ್ಯಪಾನ ಶರೀರ ಮತ್ತು ಮನಸ್ಸಿಗೆ ಮಾತ್ರವಲ್ಲ, ಕುಟುಂಬ ಮತ್ತು ಸಮಾಜಕ್ಕೂ ವಿನಾಶಕಾರಿ ಎಂಬುದನ್ನು ಕುಡುಕರ ಸಹಿತ ಎಲ್ಲರೂ ಒಪ್ಪುತ್ತಾರೆ. ಆದರೂ ಸುಮಾರು 16 ಕೋಟಿ ಭಾರತೀಯರು ಈ ಘಾತುಕ ಚಟ ಬೆಳೆಸಿ ಕೊಂಡಿದ್ದಾರೆ. ಅವರಲ್ಲಿ ಸುಮಾರು 7 ಕೋಟಿ ಮಂದಿಯ ವ್ಯಸನದ ಮಟ್ಟ ಎಷ್ಟೊಂದು ತೀವ್ರವಾಗಿದೆಯೆಂದರೆ, ಅವರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯವಿದೆ. ಭಾವುಕ, ವಿಭಾಜಕ ಮತ್ತು ನಿರರ್ಥಕ ವಿಷಯಗಳ ಕುರಿತಾದ ಚರ್ಚೆಗೆ ಧಾರಾಳ ಸಮಯ ಮೀಸಲಿಟ್ಟಿರುವ ನಮ್ಮ ಭಾರತೀಯ ಸಮಾಜದಲ್ಲಿ, ಜಾತ್ಯತೀತವಾಗಿ ಎಲ್ಲರನ್ನೂ ನಾಶಮಾಡುವ ಈ ಚಟದ ಕುರಿತು ಯಾವುದೇ ದೊಡ್ಡ ಮಟ್ಟದ ಚರ್ಚೆ ಕೇಳಿ ಬರುತ್ತಿಲ್ಲ. ಕ್ರೀಡಾ ರಂಗದಲ್ಲಿನ ನಮ್ಮ ಸಾಧನೆ ಕೂಡ ನಮ್ಮ ಒಟ್ಟು ಸ್ವಾಸ್ಥದ ಒಂದು ಪರಿಣಾಮಕಾರಿ ಮಾಪಕ. ಕಳೆದ ಒಲಿಂಪಿಕ್ಸ್‌ನಲ್ಲಿ ನಮ್ಮ ನೆರೆಯ ಪರಂಪರಾಗತ ಪ್ರತಿಸ್ಪರ್ಧಿ ಚೀನಾ 38 ಚಿನ್ನದ ಪದಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು ಮತ್ತು ನಾವು ಕೇವಲ ಒಂದು ಚಿನ್ನದ ಪದಕದೊಂದಿಗೆ 48ನೇ ಸ್ಥಾನದಲ್ಲಿದ್ದೆವು. ಈ ಸ್ಥಿತಿಯಲ್ಲಿ ನಾವು ಚೀನಾವನ್ನು ನಮ್ಮ ಪ್ರತಿಸ್ಪರ್ಧಿ ಎಂದು ಕರೆದರೆ ನಾವೇ ನಗೆಪಾಟಲಿಗೀಡಾಗುತ್ತೇವೆ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ರಹಸ್ಯ ಅಲ್ಲವೆಂದಾದರೆ ಈ ನಮ್ಮ ಹೀನಾಯ ನಿರ್ವಹಣೆಗೆ ಕಾರಣವೇನು ಎಂಬ ಕುರಿತು ಬಹಿರಂಗ ಚರ್ಚೆ ನಡೆಯಬೇಕಲ್ಲವೇ?
ನಮ್ಮ ನೆಲದಲ್ಲಿ ಶೋಷಣೆ ಮತ್ತು ದೌರ್ಜನ್ಯಗಳೆಲ್ಲ ಅತ್ಯಧಿಕ ಪ್ರಮಾಣದಲ್ಲಿ ನಡೆದಿರುವುದು ಜಾತಿ ವ್ಯವಸ್ಥೆಯ ಹೆಸರಲ್ಲಿ. ಸಹಸ್ರಮಾನಗಳಿಂದ ನಮಗೆ ಅಂಟಿಕೊಂಡಿರುವ ಕಳಂಕ ಇದು. ಆದರೂ ಇಲ್ಲಿ ಜಾತಿ ವ್ಯವಸ್ಥೆಯೊಂದಿಗೆ ನೇರ ಸಂಬಂಧ ಇರುವ ಸಾಮಾಜಿಕ ನ್ಯಾಯ, ಎಲ್ಲ ಕ್ಷೇತ್ರಗಳಲ್ಲಿ ಎಲ್ಲ ಜಾತಿಗಳಿಗೆ ಅನುಪಾತಿಕ ಪ್ರಾತಿನಿಧ್ಯ, ಎಲ್ಲ ವರ್ಗಗಳ ಸಬಲೀಕರಣ, ಎಲ್ಲರಿಗೆ ಘನತೆಯ ಸ್ಥಾನಮಾನದಂತಹ ಯಾವುದೇ ವಿಷಯಗಳು ಗಂಭೀರವಾಗಿ, ವ್ಯಾಪಕ ಪ್ರಮಾಣದಲ್ಲಿ ಚರ್ಚೆಗೆ ಬಂದದ್ದೇ ಇಲ್ಲ. ಜಾತಿಜನಗಣತಿ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ, ನ್ಯಾಯಾಂಗವು ಹೇರಿದ 50 ಶೇ. ಮಿತಿಯ ನಿವಾರಣೆ ಇತ್ಯಾದಿಗಳ ಕುರಿತಾದ ಚರ್ಚೆಗಳು ಇಲ್ಲಿ ತಲೆ ಎತ್ತಿದೊಡನೆ ಅವುಗಳ ಸದ್ದಡಗಿಸಿಬಿಡಲಾಗುತ್ತದೆ. ಏಕಿರಬಹುದು?
ಈ ವಿಷಯಗಳ ಕುರಿತು ಚರ್ಚೆ ಸಂವಾದಗಳು ನಡೆಯುತ್ತಿಲ್ಲ ಎಂಬುದು ಆಕಸ್ಮಿಕವೇನಲ್ಲ. ಅದು ನಿಜವಾಗಿ ಈ ಕುರಿತು ಚರ್ಚೆ, ಸಂವಾದಗಳು ನಡೆಯಬಾರದು ಎಂದು ಅಪೇಕ್ಷಿಸುವವರ ವಿಜಯವಾಗಿದೆ. ಯಾವುದೇ ಸಮಸ್ಯೆಯ ಕುರಿತು ನಡೆಯುವ ಸಾರ್ವಜನಿಕ ಚರ್ಚೆಯು ಆ ಸಮಸ್ಯೆಯ ಪರಿಹಾರದ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿರುತ್ತದೆ. ಅದಾನಿ ಮತ್ತು ಅಂಬಾನಿಗಳು, ಜನತೆಯ ಖಜಾನೆಯಿಂದ ಅವರು ದೋಚಿರುವ ಲಕ್ಷಾಂತರ ಕೋಟಿ ಅಕ್ರಮ ಸಂಪತ್ತು, ಅವರ ಆದೇಶಾನುಸಾರ ಸರಕಾರಗಳು ರೂಪಿಸುವ ವಿನಾಶಕಾರಿ ಆರ್ಥಿಕ ನೀತಿಗಳು ಮತ್ತು ಯೋಜನೆಗಳು, ಅದರ ಪರಿಣಾಮವಾಗಿ ಸಮಾಜದಲ್ಲಿ ಹೆಚ್ಚುತ್ತಿರುವ ಅಸಮತೋಲನ ಮತ್ತು ಅಂತರ - ಈ ಎಲ್ಲ ಸಂಗತಿಗಳು ಚರ್ಚೆಗೆ ಬಂದರೆ ತಾನೇ ಜನರಲ್ಲಿ ಆ ಕುರಿತು ಜಾಗೃತಿ ಮೂಡುವುದು? ಜಾಗೃತಿ ಮೂಡಿದರೆ ತಾನೇ ಪ್ರಸ್ತುತ ಅನ್ಯಾಯಗಳ ವಿರುದ್ಧ ಪ್ರತಿರೋಧ ಬೆಳೆಯುವುದು? ಪ್ರತಿರೋಧ ಬೆಳೆದರೆ ತಾನೇ ಬದಲಾವಣೆಯ ಪ್ರಕ್ರಿಯೆ ತೊಡಗುವುದು? ಚರ್ಚೆಯನ್ನೇ ಹತ್ತಿಕ್ಕಿ ಬಿಟ್ಟರೆ ಕುಬೇರರು, ಜಾತಿವ್ಯವಸ್ಥೆಯ ಪ್ರತಿಪಾದಕರು, ಪುರೋಹಿತರು ಮತ್ತು ಸಮಾಜದ ಇತರೆಲ್ಲರ ಪಾಲನ್ನು ತಾವೇ ಕಬಳಿಸುತ್ತಿರುವವರು ಸುರಕ್ಷಿತರಾಗಿರುತ್ತಾರೆ. ಆದ್ದರಿಂದಲೇ ಈ ಶಕ್ತಿಗಳು ಸಮಾಜದಲ್ಲಿ ಯಾವುದೇ ನೈಜ ಸಮಸ್ಯೆಯ ಕುರಿತು ಸಂವಾದ ನಡೆಯದಂತೆ ನೋಡಿಕೊಳ್ಳುತ್ತವೆ. ಈ ಉದ್ದೇಶದಿಂದಲೇ ಅವರು ದನ, ಮಸೀದಿ, ಮಂದಿರ, ಹಲಾಲ್, ಜಟ್ಕಾ, ಅಝಾನ್, ಹಿಜಾಬ್, ಈದ್ಗಾ, ಹನುಮಾನ್ ಚಾಲೀಸಾ ಮುಂತಾದ ನಕಲಿ ಚರ್ಚಾ ವಿಷಯಗಳನ್ನು ಕೊಟ್ಟು ಜನರು ಅವುಗಳಲ್ಲೇ ಮೈಮರೆಯುವಂತೆ ಮಾಡುತ್ತಾರೆ. ಹಾಗೆ ಮೈ ಮರೆತವರಿಗೆ ಸಾಮಾಜಿಕ ನ್ಯಾಯ ಮಾತ್ರವಲ್ಲ, ಸ್ವತಃ ತಮ್ಮ ಮಕ್ಕಳ ಹಸಿವು ಕೂಡಾ ಮರೆತು ಹೋಗುತ್ತದೆ.
ಇಂತಹ ಸನ್ನಿವೇಶದಲ್ಲಿ ಸಮಾಜಕ್ಕೆ ಬಹಳಷ್ಟು ಹಿತವನ್ನು ಮಾಡುವ ಅವಕಾಶ ಮಾನವೀಯ ಕಾಳಜಿ ಹಾಗೂ ಬದ್ಧತೆ ಇರುವ ಮಾಧ್ಯಮಗಳು ಮತ್ತು ಪತ್ರಕರ್ತರ ಮುಂದಿದೆ. ಜನಹಿತದ ದೃಷ್ಟಿಯಿಂದ ಯಾವ ವಿಷಯಗಳು ವ್ಯಾಪಕ ಚರ್ಚೆಯಲ್ಲಿರಬೇಕು ಮತ್ತು ಯಾಕೆ ಎಂಬುದನ್ನು ಅವರು ಸಮಾಜಕ್ಕೆ ಪದೇ ಪದೇ ನೆನಪಿಸುತ್ತಿರಬಹುದು. ಸಮಾಜದ್ರೋಹಿಗಳು ನಕಲಿ ವಿಷಯಗಳನ್ನು ಚರ್ಚೆಗೆ ತಂದು ಜನರನ್ನು ದಾರಿ ತಪ್ಪಿಸುವ ಸಂಚು ಹೂಡಿದಾಗಲೆಲ್ಲ ಅವರ ಸಂಚುಗಳನ್ನು ಬಯಲಿಗೆಳೆಯಬಹುದು. ಉಪಯುಕ್ತ ಚರ್ಚೆಗಳು ಬಹುಕಾಲ ಉಳಿದು ಸರಿಯಾದ ದಿಕ್ಕಿನಲ್ಲಿ ಚಲಿಸುವಂತೆ, ಆ ಮೂಲಕ ಸಮಾಜದಲ್ಲಿ ಜಾಗೃತಿ ಬೆಳೆಯುವಂತೆ ಮತ್ತು ಆ ಜಾಗೃತಿಯು ಅನ್ಯಾಯಗಳ ವಿರುದ್ಧ ಪ್ರತಿರೋಧದ ರೂಪತಾಳಿ ಸಾಮಾಜಿಕ ಪರಿವರ್ತನೆಗೆ ಕಾರಣವಾಗುವಂತೆ ನೋಡಿಕೊಳ್ಳಬಹುದು. ‘ವಾರ್ತಾಭಾರತಿ’ಯಲ್ಲಿ ನಾವು ನಮ್ಮ ಸೀಮಿತ ಸಾಮರ್ಥ್ಯಾನುಸಾರ ಇದನ್ನೇ ಮಾಡುತ್ತಿದ್ದೇವೆ.

-ಅಬ್ದುಸ್ಸಲಾಮ್ ಪುತ್ತಿಗೆ, ಪ್ರಧಾನ ಸಂಪಾದಕ,
‘ವಾರ್ತಾಭಾರತಿ’ ಬಳಗದ ಪರವಾಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News