ಹಿಜಾಬ್ ವಿವಾದ: ಕರ್ನಾಟಕ ಸರಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್, ಅರ್ಜಿ ವಿಚಾರಣೆ ಸೆ.5ಕ್ಕೆ ಮುಂದೂಡಿಕೆ
ಹೊಸದಿಲ್ಲಿ: ಕರ್ನಾಟಕ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ಆದೇಶವನ್ನು(High Court’s order) ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ (supremecourt) ಸೋಮವಾರ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಹಾಗೂ ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಕೆಲವು ಮೇಲ್ಮನವಿದಾರರ ಮುಂದೂಡಿಕೆ ಕೋರಿಕೆಯನ್ನು ನಿರಾಕರಿಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಲಾಗಿದೆ.
ಹಿಜಾಬ್ ನಿಷೇಧವನ್ನು ಎತ್ತಿಹಿಡಿದ ಮಾರ್ಚ್ 15 ರ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸುವ ಅರ್ಜಿಗಳು ಹಿಂದಿನ ಸಿಜೆಐ ಎನ್‌ವಿ ರಮಣ ಅವರ ಅವಧಿಯಲ್ಲಿ ಹಲವು ಸುತ್ತಿನ ಉಲ್ಲೇಖಗಳ ಹೊರತಾಗಿಯೂ ಪಟ್ಟಿ ಮಾಡಲಾಗಿರಲಿಲ್ಲ.
ಕರ್ನಾಟಕ ಹೈಕೋರ್ಟ್ ತೀರ್ಪು ನೀಡುವಾಗ ಫೆಬ್ರವರಿ 5, 2022 ರ ಸರಕಾರಿ ಆದೇಶವನ್ನು ಎತ್ತಿಹಿಡಿದಿದೆ.
ಹಿಜಾಬ್ ಧರಿಸುವುದು ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ರಕ್ಷಿಸಬಹುದಾದ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂಬ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ.
ಉಡುಪಿಯ ಪ್ರಿ-ಯೂನಿವರ್ಸಿಟಿ ಕಾಲೇಜುಗಳಲ್ಲಿ ಓದುತ್ತಿರುವ ಮುಸ್ಲಿಂ ಬಾಲಕಿಯರು ತರಗತಿಯಲ್ಲಿ ಹಿಜಾಬ್ ಧರಿಸುವ ಹಕ್ಕನ್ನು ಕೋರಿ ಸಲ್ಲಿಸಿದ್ದ ಅರ್ಜಿಗಳ ಗುಚ್ಚವನ್ನು ಹೈಕೋರ್ಟ್ ವಜಾಗೊಳಿಸಿದೆ.