ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ

Update: 2022-08-29 10:55 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಹಣದುಬ್ಬರ ಕುರಿತು ಅಮೆರಿಕದ ಕಳವಳವು ಸೋಮವಾರ ಭಾರತದ ಹಣಕಾಸು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿದೆ. ಆರ್ಥಿಕ ಬೆಳವಣಿಗೆಯನ್ನು ಬಲಿಗೊಟ್ಟಾದರೂ ಸರಿ,ಹೆಚ್ಚಿನ ಹಣದುಬ್ಬರವನ್ನು ತಾನು ನಿಭಾಯಿಸುವುದಾಗಿ ಅಮೆರಿಕದ ಹೇಳಿಕೆಯ ಹಿನ್ನೆಲೆಯಲ್ಲಿ ಸೋಮವಾರ ಭಾರತೀಯ ರೂಪಾಯಿ(Rupee) ಡಾಲರ್‌( US dollar)ನೆದುರು 80.15ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಭಾರತೀಯ ಶೇರು ಮಾರುಕಟ್ಟೆಯೂ ತಲ್ಲಣಗೊಂಡಿದೆ. ಬಾಂಬೆ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್ ಬೆಳಿಗ್ಗೆ 1400 ಅಂಕಗಳಿಗೂ ಅಧಿಕ ನಷ್ಟದೊಂದಿಗೆ ಆರಂಭಗೊಂಡಿದ್ದು,ಮಧ್ಯಾಹ್ನದ ವೇಳೆಗೆ ಚೇತರಿಸಿಕೊಂಡಿದೆಯಾದರೂ ಈಗಲೂ ಸುಮಾರು 800 ಅಂಕಗಳ ನಷ್ಟದಲ್ಲಿಯೇ ಇದೆ.

ಜುಲೈನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಗಳಲ್ಲಿ ಏರಿಕೆಯಿಂದಾಗಿ ರೂಪಾಯಿ ಮೊದಲ ಬಾರಿಗೆ 80ರ ಗಡಿಗಿಂತ ಕೆಳಕ್ಕೆ ಜಾರಿತ್ತು. ಆದಾಗ್ಯೂ ಕಳೆದ ಕೆಲವು ವಾರಗಳಲ್ಲಿ ರೂಪಾಯಿ ಚೇತರಿಸಿಕೊಂಡಿತ್ತು. ಆದರೆ ಯುಎಸ್ ಫೆಡರಲ್ ರಿಸರ್ವ್‌ನ ಮುಖ್ಯಸ್ಥ ಜೆರೋಮ್ ಪೊವೆಲ್ ಅವರು ಕಳೆದ ವಾರ ನೀಡಿದ್ದ ಹೇಳಿಕೆಗೆ ಭಾರತೀಯ ಶೇರು ಮಾರುಕಟ್ಟೆಗಳು ಸೋಮವಾರ ಬೆಳಿಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿವೆ.

ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪೊವೆಲ್, ಹಣದುಬ್ಬರವನ್ನು ನಿಯಂತ್ರಿಸಲು ಅಮೆರಿಕದ ಆರ್ಥಿಕತೆಗೆ ಕೆಲ ಸಮಯ ಬಿಗು ಹಣಕಾಸು ನೀತಿಯ ಅಗತ್ಯವಿದೆ. ಆರ್ಥಿಕ ಬೆಳವಣಿಗೆ ಕುಂಠಿತಗೊಂಡರೂ ಸರಿ, ಬೆಲೆ ಏರಿಕೆಯನ್ನು ನಿಯಂತ್ರಿಸಲೇಬೇಕಿದೆ ಎಂದು ಹೇಳಿದ್ದರು.

ಶುಕ್ರವಾರ ಡಾಲರ್‌ನೆದುರು 79.87ಕ್ಕೆ ಮುಕ್ತಾಯಗೊಂಡಿದ್ದ ರೂಪಾಯಿ ಪೊವೆಲ್ ಹೇಳಿಕೆಯ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ 80.02ರಲ್ಲಿ ಆರಂಭಗೊಂಡಿದ್ದು,ಕೆಲವೇ ಸಮಯದಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 80.15ಕ್ಕೆ ಕುಸಿಯಿತು.

ಇದನ್ನೂ ಓದಿ: ಅದಾನಿ ಕ್ರಮ ಮಾನ್ಯವಾಗಿದೆಯೇ ಎಂದು ಸೆಬಿಗೆ ಕೇಳಿ ಪತ್ರ ಬರೆದ ಎನ್‍ಡಿಟಿವಿ ಸಹಸ್ಥಾಪಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News