ಕಾಂಗ್ರೆಸ್‌ಗೆ ಹಾರೈಕೆಗಿಂತ ಔಷಧಿಗಳ ಹೆಚ್ಚಿನ ಅಗತ್ಯವಿದೆ: ಗುಲಾಂ ನಬಿ ಆಝಾದ್ ವಾಗ್ದಾಳಿ
ಹೊಸದಿಲ್ಲಿ,ಆ.29: ಕಾಂಗ್ರೆಸ್ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿಯನ್ನು ನಡೆಸಿದ ಪಕ್ಷದ ಮಾಜಿ ನಾಯಕ ಗುಲಾಂ ನಬಿ ಆಝಾದ್ ಅವರು,ಪಕ್ಷಕ್ಕೆ ಚಿಕಿತ್ಸೆಗಾಗಿ ಔಷಧಿಗಳ ಅಗತ್ಯವಿದೆ ಮತ್ತು ಈ ಔಷಧಿಗಳನ್ನು ವೈದ್ಯರ ಬದಲು ಕಂಪೌಂಡರ್‌ಗಳು ನೀಡುತ್ತಿದ್ದಾರೆ ಎಂದು ಹೇಳಿದರು.
ಪಕ್ಷವನ್ನು ಸರಿಯಾಗಿ ಸಂಘಟಿಸಲು ನಾಯಕತ್ವಕ್ಕೆ ಸಮಯವಿಲ್ಲ ಮತ್ತು ರಾಹುಲ್ ಗಾಂಧಿಯವರಿಗೆ ರಾಜಕೀಯದಲ್ಲಿ ಒಲವು ಅಥವಾ ಆಸಕ್ತಿಯಿಲ್ಲ ಎಂದೂ ಅವರು ಆರೋಪಿಸಿದರು. ಆಝಾದ್ ಕಳೆದ ಶುಕ್ರವಾರ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ.
ತನ್ನ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಝಾದ್,ಕಾಂಗ್ರೆಸ್ ರಾಜ್ಯಗಳಲ್ಲಿ ಬಿಂಬಿಸುತ್ತಿರುವ ನಾಯಕತ್ವವು ಪಕ್ಷದ ಸದಸ್ಯರನ್ನು ಒಗ್ಗೂಡಿಸುವ ಬದಲು ಅವರು ಪಕ್ಷವನ್ನು ತೊರೆಯುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.
ಜಮ್ಮು-ಕಾಶ್ಮೀರದಲ್ಲಿ ತನ್ನ ರಾಜಕಾರಣಕ್ಕೆ ಯಾವುದೇ ಪ್ರಯೋಜನವಾಗದ ಕಾರಣ ತಾನು ಬಿಜೆಪಿಯನ್ನು ಸೇರುವುದಿಲ್ಲ. ಅಲ್ಲಿ ವಿಧಾನಸಭಾ ಚುನಾವಣೆ ಯಾವುದೇ ಸಮಯಕ್ಕೆ ಘೋಷಣೆಯಾಗಬಹುದು,ಹೀಗಾಗಿ ತಾನು ಶೀಘ್ರವೇ ನೂತನ ಪಕ್ಷವನ್ನು ಸ್ಥಾಪಿಸಲಿದ್ದೇನೆ ಎಂದು ಅವರು ತಿಳಿಸಿದರು.
‘ನಾನು ಕಾಂಗ್ರೆಸ್‌ಗೆ ಶುಭ ಹಾರೈಕೆಗಳನ್ನಷ್ಟೇ ಹೇಳಬಲ್ಲೆ,ಆದರೆ ಅದಕ್ಕೆ ನನ್ನ ಹಾರೈಕೆಗಳಿಗಿಂತ ಔಷಧಿಗಳ ಹೆಚ್ಚಿನ ಅಗತ್ಯವಿದೆ ಮತ್ತು ಈ ಔಷಧಿಗಳನ್ನು ವೈದ್ಯರ ಬದಲು ಕಂಪೌಂಡರ್‌ಗಳು ನೀಡುತ್ತಿದ್ದಾರೆ. ಕಾಂಗ್ರೆಸ್‌ನ ಚಿಕಿತ್ಸೆಗೆ ತಜ್ಞವೈದ್ಯರ ಅಗತ್ಯವಿದೆ’ ಎಂದರು.
ಪಕ್ಷದಲ್ಲಿನ ಸ್ಥಿತಿಯನ್ನು ಸರಿಪಡಿಸಲು ನಾಯಕತ್ವಕ್ಕೆ ಸಮಯವಿಲ್ಲ. ಜನರನ್ನು ಪಕ್ಷದೊಂದಿಗೆ ಒಗ್ಗೂಡಿಸುವ ಬದಲು ಅವರು ಪಕ್ಷವನ್ನು ತೊರೆಯುವಂತೆ ಮಾಡುತ್ತಿರುವ ನಾಯಕರನ್ನು ಕಾಂಗ್ರೆಸ್ ರಾಜ್ಯಗಳಿಗೆ ನೀಡುತ್ತಿದೆ ಮತ್ತು ಅವರನ್ನು ಉತ್ತೇಜಿಸುತ್ತಿದೆ ಎಂದು ಆಝಾದ್ ಹೇಳಿದರು. ಪಕ್ಷದ ಬುನಾದಿಯು ಅತ್ಯಂತ ದುರ್ಬಲಗೊಂಡಿದೆ ಮತ್ತು ಸಂಘಟನೆಯು ಯಾವಾಗ ಬೇಕಾದರೂ ಕುಸಿಯಬಹುದು. ಇದೇ ಕಾರಣದಿಂದ ಕೆಲವು ನಾಯಕರೊಂದಿಗೆ ಸೇರಿ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದಾಗಿ ಅವರು ತಿಳಿಸಿದರು.
ಪಕ್ಷದಲ್ಲಿ ತನ್ನನ್ನು ಪ್ರಶ್ನಿಸಿದ್ದವರ ವಿರುದ್ಧ ದಾಳಿ ನಡೆಸಿದ ಅವರು, ಕಾಂಗ್ರೆಸ್‌ನಲ್ಲಿ ಗುಮಾಸ್ತಗಿರಿ ಮಾಡುತ್ತಿರುವ ಕೆಲವರಿದ್ದಾರೆ ಮತ್ತು ಅವರು ನಾಯಕರ ವಿರುದ್ಧ ಸುದ್ದಿಗಳನ್ನು ಹರಡುತ್ತಾರೆ ಎಂದು ಕಿಡಿಕಾರಿದರು.