ಹಬ್ಬದ ವೇಳೆ ಕಸಾಯಿಖಾನೆ ಬಂದ್‌ ವಿರೋಧಿಸಿ ಅರ್ಜಿ ವಿಚಾರಣೆ: ʼಒಂದೆರಡು ದಿನ ತಿನ್ನದೇ ಇರಬಹುದುʼ ಎಂದ ಕೋರ್ಟ್‌

Update: 2022-08-30 16:51 GMT
ಸಾಂದರ್ಭಿಕ ಚಿತ್ರ 

ಅಹ್ಮದಾಬಾದ್: ಜೈನರ ಹಬ್ಬದ ಸಂದರ್ಭ ನಗರದ ಏಕೈಕ ಕಸಾಯಿಖಾನೆಯನ್ನು(Slaughter House) ಮುಚ್ಚಲು ಅಹ್ಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್(Ahmadabad Muncipal Corporation) ಕೈಗೊಂಡ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿದ ಗುಜರಾತ್ ಹೈಕೋರ್ಟ್ "....ತಿನ್ನುವುದರಿಂದ ನೀವು ಒಂದೆರಡು ದಿನಗಳ ಕಾಲ ದೂರವಿರಬಹುದು,'' ಎಂದು ಹೇಳಿದೆ.

ಅರ್ಜಿಯನ್ನು ಸೋಮವಾರ ಕುಲ್ ಹಿಂದ್ ಜಮಿಯತ್-ಅಲ್-ಖುರೇಶ್ ಕ್ರಿಯಾ ಸಮಿತಿ, ಗುಜರಾತ್ ಇದರ ಪರವಾಗಿ ಡೇನಿಶ್ ಖುರೇಶಿ ರಝಾವಾಲ ಮತ್ತು ಇನ್ನೊಬ್ಬರು ಸಲ್ಲಿಸಿದ್ದರು. ಆಗಸ್ಟ್ 18ರಂದು ಅಹ್ಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್‍ನ ಸ್ಥಾಯಿ ಸಮಿತಿಯು ನಿರ್ಧಾರ ಕೈಗೊಂಡು ಆಗಸ್ಟ್ 24 ಮತ್ತು 31ರಂದು ನಡೆಯಲಿರುವ ಜೈನರ ಹಬ್ಬ ಪರ್ಯೂಶಣ್ ಪರ್ವ್  ಮತ್ತು ಸೆಪ್ಟೆಂಬರ್ 5 ಹಾಗೂ 9ರಂದು ನಡೆಯುವ ಸಂಬಂಧಿತ ಆಚರಣೆಗಳ ಕಾರಣ ನಗರದ ಕಸಾಯಿಖಾನೆ ಮುಚ್ಚಲಾಗುವುದು ಎಂದು ತಿಳಿಸಿತ್ತು.

ಈ ಪ್ರಕರಣದ ವಿಚಾರಣೆ ಇಂದು ನಡೆದ ವೇಳೆ ಜಸ್ಟಿಸ್ ಸಂದೀಪ್ ಭಟ್ಟ್ ಮೇಲಿನಂತೆ ಹೇಳಿದರು.

ಆದರೆ ಅರ್ಜಿದಾರರು ಪ್ರತಿಕ್ರಿಯಿಸಿ "... ಒಂದೆರಡು ದಿನಗಳ ಕಾಲ ತಾಳಿಕೊಳ್ಳುವ ಪ್ರಶ್ನೆಯಲ್ಲ, ಇದು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ವಿಚಾರ ಹಾಗೂ ಮೂಲಭೂತ ಹಕ್ಕುಗಳನ್ನು ತಡೆಹಿಡಿದ ಒಂದೇ ಒಂದು ನಿಮಿಷವನ್ನು ನಮ್ಮ ದೇಶದಲ್ಲಿ ಊಹಿಸಲು ಸಾಧ್ಯವಿಲ್ಲ. ಈ ಹಿಂದೆ ಕೂಡ ಇಂತಹುದೇ ಸಂದರ್ಭಗಳಲ್ಲಿ ಕಸಾಯಿಖಾನೆಗಳನ್ನು ಮುಚ್ಚಲಾಗಿತ್ತು. ಮುಂದೆ ಹೀಗಾಗದಂತೆ ತಡೆಯಲು ನ್ಯಾಯಾಲಯದ ಕದ ತಟ್ಟಿದ್ದೇವೆ" ಎಂದು ಅರ್ಜಿದಾರರು ಹೇಳಿದರು.

ಗುಜರಾತ್ ಹೈಕೋರ್ಟ್ ಡಿಸೆಂಬರ್ 2021ರಲ್ಲಿ ನೀಡಿದ್ದ ಮೌಖಿಕ ಹೇಳಿಕೆಯಲ್ಲಿ ಜನರ ಆಹಾರದ ಅಭ್ಯಾಸಗಳನ್ನು ನಿಯಂತ್ರಿಸುವುದರಿಂದ ದೂರವಿರುವಂತೆ ಅಹ್ಮದಾಬಾದ್ ಮುನಿಸಿಪಲ್ ಕೌನ್ಸಿಲ್‍ಗೆ ಸೂಚಿಸಿತ್ತು ಎಂದೂ ಅರ್ಜಿದಾರರು ನೆನಪಿಸಿದ್ದಾರೆ.

ಇನ್ನಷ್ಟು ದಾಖಲೆಗಳನ್ನು ಹಾಜರುಪಡಿಸಲು ಅರ್ಜಿದಾರರು ಸಮಯ ಕೋರಿದ್ದರಿಂದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ನಿಗದಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News