×
Ad

ಕಾಸರಗೋಡು: ರೈಲು ಹಳಿ ಮೇಲೆ ಕಬ್ಬಿಣದ ಬೀಮ್ ಇಟ್ಟ ಪ್ರಕರಣ; ತಮಿಳುನಾಡು ಮೂಲದ ಮಹಿಳೆ ಸೆರೆ

Update: 2022-08-31 20:11 IST

ಕಾಸರಗೋಡು: ರೈಲು ಹಳಿಯಲ್ಲಿ ಕಾಂಕ್ರಿಟ್ ಒಳಗೊಂಡ ಕಬ್ಬಿಣದ ಬೀಮ್ ಇಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳುನಾಡು ಮೂಲದ ಮಹಿಳೆಯನ್ನು ರೈಲ್ವೆ ಭದ್ರತಾ ಪಡೆ ಹಾಗೂ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಬೇಕಲದಲ್ಲಿ ವಾಸವಾಗಿರುವ ತಮಿಳುನಾಡು ವಿಲ್ಲಾಪುರದ ಕನಕವಳ್ಳಿ (22) ಬಂಧಿತೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಜರಿ ಹೆಕ್ಕುವ ಕಾಯಕ ನಡೆಸುತ್ತಿದ್ದ ಈಕೆ ಸಿಮೆಂಟ್ ಒಳಗೊಂಡ ಕಬ್ಬಿಣದ ಸರಳಿನಿಂದ ಸಿಮೆಂಟ್ ಬೇರ್ಪಡಿಸುವ ಉದ್ದೇಶದಿಂದ ರೈಲು ಹಳಿಯಲ್ಲಿ ಇಟ್ಟಿದ್ದಾಗಿ  ವಿಚಾರಣೆ  ವೇಳೆ ತಿಳಿಸಿದ್ದಾಳೆ ಎಂದು  ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳವಾರ ಸಂಜೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಈಕೆಯನ್ನು ಗಮನಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆ. 21ರಂದು ಕಾಸರಗೋಡು – ಕಾಂಞಗಾಡು ಮಧ್ಯೆ ಹಾದುಹೋಗುವ ಹಳಿಗಳಲ್ಲಿ ಕೋಟಿಕುಳಂ-ಬೇಕಲ ನಡುವೆ ಮೊದಲು ಈ ದುಷ್ಕೃತ್ಯ ನಡೆಸಲಾಗಿತ್ತು. ತೃಕ್ಕನ್ನಾಡ್ ದೇಗುಲದ ಹಿಂದೆ ರೈಲ್ವೆ ಹಳಿಗಳ ಮೇಲೆ ಕಬ್ಬಿಣದ ಸರಳುಗಳು, ಬೀಮ್ ಪತ್ತೆಯಾಗಿತ್ತು. ರೈಲ್ವೆ ಗಾರ್ಡ್ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ.

ಒಂದು ತಿಂಗಳ ಅವಧಿಯಲ್ಲಿ ಕುಂಬಳೆಯಿಂದ ಬೇಕಲ ತನಕ ಐದಕ್ಕೂ ಅಧಿಕ ಇಂತಹ ಪ್ರಕರಣಗಳು ನಡೆದಿವೆ. ಕುಂಬಳೆ ನಿಲ್ದಾಣದ ಸಮೀಪ ರೈಲ್ವೆ ಹಳಿಗಳ ಮೇಲೆ ಕಲ್ಲುಗಳು ಪತ್ತೆಯಾಗಿತ್ತು. ಸುಮಾರು 35 ಕೆಜಿ ತೂಗುವ ಕಾಂಕ್ರಿಟ್ ತುಂಡೊಂದು ಪತ್ತೆಯಾಗಿದೆ. ಚಿತ್ತಾರಿಯಲ್ಲಿ ಕೊಯಂಬತ್ತೂರು-ಮಂಗಳೂರು ರೈಲಿನ ಮೇಲೆ ಕಲ್ಲು ತೂರಾಟ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News