ಪ್ರವಾಸಿ ಭಾರತೀಯ ಗರ್ಭಿಣಿ ಮೃತ್ಯು: ಪೋರ್ಚುಗಲ್‌ನ ಆರೋಗ್ಯ ಸಚಿವೆ ರಾಜೀನಾಮೆ
ಲಿಸ್ಬನ್: ಪೋರ್ಚುಗಲ್‌ನ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ(Portugal's Health Minister Marta Temido)ಅವರು ತುರ್ತು ಪ್ರಸೂತಿ ಸೇವೆಗಳನ್ನು ತಾತ್ಕಾಲಿಕವಾಗಿ ಮುಚ್ಚುವ ನಿರ್ಧಾರದ ಬಗ್ಗೆ ವ್ಯಾಪಕ ಟೀಕೆಗಳು ಬಂದ ನಂತರ ಮಂಗಳವಾರ ರಾಜೀನಾಮೆ( resigned)ನೀಡಿದರು.
ಲಿಸ್ಬನ್‌ನ ಮುಖ್ಯ ಆಸ್ಪತ್ರೆ ಸಾಂತಾ ಮಾರಿಯಾದಿಂದ ರಾಜಧಾನಿಯ ಮತ್ತೊಂದು ಆಸ್ಪತ್ರೆಗೆ ಆಂಬ್ಯುಲೆನ್ಸ್ ವರ್ಗಾವಣೆಯ ಸಮಯದಲ್ಲಿ ಭಾರತದ ಗರ್ಭಿಣಿ ಮಹಿಳೆಯೊಬ್ಬರು (Indian pregnant woman)ಹೃದಯ ಸ್ತಂಭನದಿಂದ ಶನಿವಾರ ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಹೊರಬಂದ ಕೆಲವೇ ಗಂಟೆಗಳ ನಂತರ ಟೆಮಿಡೊ ರಾಜೀನಾಮೆ ನೀಡಿದ್ದಾರೆ.
ಟೆಮಿಡೊ ಅವರು ಸಚಿವ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಏಕೆಂದರೆ ಅವರು "ಇನ್ನು ಮುಂದೆ ಕಚೇರಿಯಲ್ಲಿ ಉಳಿಯಲು ಪರಿಸ್ಥಿತಿ ಪೂರಕವಾಗಿಲ್ಲ ಎಂದು ಅರಿತುಕೊಂಡಿದ್ದಾರೆ’’ ಎಂದು ಆರೋಗ್ಯ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ.
"ಟೆಮಿಡೊ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದೇನೆ. ಕೋವಿಡ್-19 ವಿರುದ್ಧ ಯಶಸ್ವಿ ವ್ಯಾಕ್ಸಿನೇಷನ್ ಅಭಿಯಾನವನ್ನು ಆಯೋಜಿಸುವುದನ್ನು ಒಳಗೊಂಡಂತೆ ಅವರ ಕೆಲಸಕ್ಕಾಗಿ ಧನ್ಯವಾದ ಅರ್ಪಿಸುವೆ'' ಎಂದು ಪ್ರತ್ಯೇಕ ಹೇಳಿಕೆಯಲ್ಲಿ ಪ್ರಧಾನ ಮಂತ್ರಿ ಆಂಟೋನಿಯೊ ಕೋಸ್ಟಾ ಹೇಳಿದ್ದಾರೆ.
ಬೇಸಿಗೆ ರಜೆಯಲ್ಲಿ ಹಲವಾರು ಆಸ್ಪತ್ರೆಗಳಲ್ಲಿ ಸಾಕಷ್ಟು ವೈದ್ಯರು ಇಲ್ಲದ ಕಾರಣ ತುರ್ತು ಪ್ರಸೂತಿ ಸೇವೆಗಳನ್ನು ವಿಶೇಷವಾಗಿ ವಾರಾಂತ್ಯದಲ್ಲಿ ಮುಚ್ಚಲು ಸರಕಾರ ಈ ಕ್ರಮ ಕೈಗೊಂಡಿತ್ತು.
ಈ ಕ್ರಮಕ್ಕೆ ಪ್ರತಿಪಕ್ಷಗಳು ಮತ್ತು ಪುರಸಭೆಗಳು ಆರೋಗ್ಯ ಸಚಿವರನ್ನು ಟೀಕಿಸಿದ್ದವು. ಗರ್ಭಿಣಿಯರು ಕೆಲವೊಮ್ಮೆ ದೂರದ ಆಸ್ಪತ್ರೆಗಳಿಗೆ ತೆರಳಬೇಕಾದ ಅಪಾಯವನ್ನು ಎದುರಿಸುವಂತಾಗಿತ್ತು.
ಟೆಮಿಡೊ ಅಕ್ಟೋಬರ್ 2018 ರಲ್ಲಿ ಆರೋಗ್ಯ ಸಚಿವರಾದರು ಹಾಗೂ ಕಳೆದ ವರ್ಷ ಕೋವಿಡ್ ವಿರುದ್ದ ಲಸಿಕೆ ಅಭಿಯಾನದ ಯಶಸ್ಸಿಗೆ ಶ್ರಮಿಸಿದ ಅತ್ಯಂತ ಜನಪ್ರಿಯ ಸರಕಾರಿ ಸದಸ್ಯರಲ್ಲಿ ಒಬ್ಬರಾಗಿದ್ದರು ಎಂದು ಸಮೀಕ್ಷೆಗಳು ತಿಳಿಸಿದ್ದವು.