ಪ್ರಧಾನಿ ಮೋದಿ ಕಾರ್ಯಕ್ರಮ: ಕಪ್ಪು ಅಂಗಿ ಧರಿಸಿದವರಿಗೆ ಪ್ರವೇಶ ನಿರಾಕರಣೆ

Update: 2022-09-02 07:16 GMT

ಮಂಗಳೂರು, ಸೆ.2: ಪ್ರಧಾನಿ ನರೇಂದ್ರ ಮೋದಿ (Narendra Modi) ಯವರ ಕಾರ್ಯಕ್ರಮ ನಡೆಯಲಿರುವ ನಗರದ ಹೊರವಲಯದ ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ಈಗಾಗಲೇ ಪಕ್ಷದ ಕಾರ್ಯಕರ್ತರು, ಸರಕಾರಿ ಯೋಜನೆಗಳ ಫಲಾನುಭವಿಗಳು ಆಗಮಿಸುತ್ತಿದ್ದಾರೆ. ಈ ನಡುವೆ ಕಪ್ಪು ಅಂಗಿ ಧರಿಸಿ ಬಂದಿರುವವರನ್ನು ಪ್ರವೇಶ ದ್ವಾರದಲ್ಲೇ ಪೊಲೀಸರು ತಡೆದು ವಾಪಸ್ ಕಳುಹಿಸುತ್ತಿದ್ದಾರೆ.

ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವವರು ಕಪ್ಪು ಬಣ್ಣದ ಅಂಗಿ, ಟೀ ಶರ್ಟ್ ಧರಿಸಬಾರದು ಎಂದು ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದರು. ಆದರೆ ಪೊಲೀಸರು ವಿಧಿಸಿರುವ‌ ನಿಯಮದ ಅರಿವಿಲ್ಲದ ಹಲವು ಯುವಕರು, ಹಿರಿಯರು ಕಪ್ಪು ಟೀ ಶರ್ಟ್, ಶರ್ಟ್ ಧರಿಸಿ ಬಂದಿದ್ದರು. ಪ್ರವೇಶ ದ್ವಾರದಲ್ಲೇ ಅವರನ್ನು ವಾಪಸ್ ಕಳಿಸಲಾಗುತ್ತಿದೆ. ಕಪ್ಪು ಲುಂಗಿ ಧರಿಸಿ ಬಂದಿದ್ದ ಅಯ್ಯಪ್ಪ ಸ್ವಾಮಿ ಮಾಲಾಧಾರಿಯೊಬ್ಬರಿಗೂ ಪ್ರವೇಶ ನಿರಾಕರಿಸಲಾಯಿತು.

ಇದನ್ನೂ ಓದಿ: ಮೋದಿಯವರೇ, ರಾಜ್ಯ ಬಿಜೆಪಿ ಸರಕಾರದ 40% ಕಮಿಷನ್ ದಂಧೆ, ಹಗರಣಗಳ ಕುರಿತು ಮಾತನಾಡುವಿರಾ: ದಿನೇಶ್ ಗುಂಡೂರಾವ್ ಪ್ರಶ್ನೆ

ಸಿಗರೇಟ್, ಲೈಟರ್, ಬೆಂಕಿಪೊಟ್ಟಣ‌, ಎಲೆ-ಅಡಿಕೆ, ಸುಣ್ಣ ಇಂತಹ ಯಾವುದೇ ವಸ್ತುಗಳನ್ನು ಒಳಗೆ ಕೊಂಡೊಯ್ಯುವಂತಿಲ್ಲ ಎಂದು ಪೊಲೀಸರು ತಿಳಿಸುತ್ತಿದ್ದಾರೆ.  ಕಟ್ಟುನಿಟ್ಟಿನ ತಪಾಸಣೆ ನಡೆಸಿ ಜನರನ್ನು ಸಮಾವೇಶದ ಮೈದಾನದ ಒಳಗೆ ಬಿಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News