ಗುಜರಾತ್: ಯಾತ್ರಾರ್ಥಿಗಳ ಮೇಲೆ ನುಗ್ಗಿದ ಕಾರು; ಆರು ಜನ ಮೃತ್ಯು, ಏಳು ಜನರಿಗೆ ಗಾಯ
ಅರಾವಳಿ,ಸೆ.2: ಗುಜರಾತಿನ ಅರಾವಳಿ ಜಿಲ್ಲೆಯ ಮಾಲ್ಪುರ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಕಾರೊಂದು ಯಾತ್ರಾರ್ಥಿಗಳ ಗುಂಪಿನ ಮೇಲೆ ನುಗ್ಗಿದ ಪರಿಣಾಮ ಆರು ಜನರು ಮೃತಪಟ್ಟಿದ್ದು,ಇತರ ಏಳು ಜನರು ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದಾಗ ಯಾತ್ರಾರ್ಥಿಗಳು ಸಮೀಪದ ಬನಾಸಕಾಂತಾ ಜಿಲ್ಲೆಯಲ್ಲಿನ ಅಂಬಾಜಿ ದೇವಸ್ಥಾನಕ್ಕೆ ಕಾಲ್ನಡಿಗೆಯಿಂದ ಸಾಗುತ್ತಿದ್ದರು.
ಆರಂಭಿಕ ಮಾಹಿತಿಯಂತೆ ಚಾಲಕ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದು ಅಪಘಾತಕ್ಕೆ ಕಾರಣವಾಗಿದೆ. ಗಾಯಾಳುಗಳನ್ನು ಆ್ಯಂಬುಲೆನ್ಸ್ನಲ್ಲಿ ಮೊಡಾಸಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಮೃತರ ಕುಟುಂಬಗಳಿಗೆ ತನ್ನ ಸಂತಾಪಗಳನ್ನು ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು,ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರಿಗೆ ತಲಾ ನಾಲ್ಕು ಲ.ರೂ. ಮತ್ತು ಗಾಯಾಳುಗಳಿಗೆ ತಲಾ 50,000 ರೂ.ಪರಿಹಾರವನ್ನು ಪ್ರಕಟಿಸಿದ್ದಾರೆ.
ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ಖಚಿತ ಪಡಿಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಅರಾವಳಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.