ಪಕ್ಷಕ್ಕಿಂತ ದೇಶ ಮುಖ್ಯವಾದಲ್ಲಿ, ಇವರನ್ನೇಕೆ ಬಂಧಿಸುತ್ತಿಲ್ಲ?

Update: 2022-09-03 04:50 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮೊನ್ನೆ ಮಹಾರಾಷ್ಟ್ರದಲ್ಲಿ ಯಶವಂತ್ ಶಿಂದೆ ಎಂಬ ಯುವಕ ತಾನು ಆರೆಸ್ಸೆಸ್ ನಡೆಸುತ್ತಿದ್ದ ಬಾಂಬ್ ತಯಾರಿಕೆ ಹಾಗೂ ಬಳಕೆಯ ತರಬೇತಿ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದುದಾಗಿಯೂ, ಇದರಲ್ಲಿ ಭಾಗವಹಿಸಿದ್ದ ಹಲವಾರು ಸಂಘಪರಿವಾರದ ಕಾರ್ಯಕರ್ತರೇ ಜಮ್ಮು, ಮಾಲೆಗಾಂವ್ ಇನ್ನಿತ್ಯಾದಿ ಕಡೆಗಳಲ್ಲಿ ಬಾಂಬ್ ಸ್ಫೋಟ ಮಾಡಿ ಅದನ್ನು ಮುಸ್ಲಿಮರ ಮೇಲೆ ಹೊರಿಸಿದ್ದಾಗಿ ಪ್ರಮಾಣಬದ್ಧ ಹೇಳಿಕೆಯನ್ನು ನೀಡಿದ್ದಾನೆ. ಆ ಅಫಿಡವಿಟ್‌ನ ಪೂರ್ಣ ಪಾಠ ಈ ದೇಶದ ಬಗ್ಗೆ ನಿಜವಾದ ಪ್ರೀತಿ-ಭಕ್ತಿ ಇರುವವರೆಲ್ಲರಿಗೂ ಆತಂಕ ಉಂಟುಮಾಡುವಂತಿದೆ. 2014ಕ್ಕೆ ಪೂರ್ವದಲ್ಲಿ ನಡೆದ ಈ ತರಬೇತಿ ಹಾಗೂ ಸ್ಫೋಟಗಳಲ್ಲಿ ಬಜರಂಗ ದಳ, ವಿಶ್ವ ಹಿಂದು ಪರಿಷತ್‌ನ ಅತ್ಯುನ್ನತ ನಾಯಕರು ಮಾತ್ರವಲ್ಲದೆ ಇಂದ್ರೇಶ್ ಕುಮಾರ್‌ರಂಥ ಆರೆಸ್ಸೆಸ್ ನಾಯಕರು ಹಾಗೂ ಕರ್ನಾಟಕದ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್‌ರಂಥ ನಾಯಕರೂ ಭಾಗವಹಿಸಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಯಶವಂತ್ ಶಿಂದೆ ಬಯಲು ಮಾಡಿದ್ದಾನೆ.

ಯಶವಂತ್‌ನ ಅಫಿಡವಿಟ್, ಅವನ ಹೇಳಿಕೆಯ ಪೂರ್ಣ ಪಾಠ ಹಾಗೂ ಹೇಳಿಕೆಯ ವೀಡಿಯೊ ವೈರಲ್ ಆಗಿ ಇಡೀ ದಿನವೇ ಕಳೆದರೂ ಗುರುವಾರ ಸಂಜೆಯವರೆಗೆ ಸಂಘಪರಿವಾರದ ಯಾವುದೇ ಸಂಘಟನೆಗಳಿಂದ ಪ್ರತಿಕ್ರಿಯೆಗಳು ಬಂದಿಲ್ಲ. ಅಷ್ಟು ಮಾತ್ರವಲ್ಲ, ದೇಶದ ಯಾವುದೇ ದೇಶಭಕ್ತ ಮಾಧ್ಯಮಗಳು ಇದನ್ನು ಪ್ರೈಮ್ ಡಿಬೇಟಿನ ವಿಷಯವನ್ನಾಗಿಸಿಕೊಳ್ಳಲಿಲ್ಲ. ಪಕ್ಷಕ್ಕಿಂತ, ವ್ಯಕ್ತಿಗಿಂತ ದೇಶ ಮುಖ್ಯ ಎನ್ನುವವರೂ ಇದರ ಬಗ್ಗೆ ಸೊಲ್ಲೆತ್ತಲಿಲ್ಲ. ಶಿಂದೆಯವರು ಹೇಳಿರುವ ವಿಷಯಗಳು ಎಷ್ಟು ಆಘಾತಕಾರಿಯಾಗಿದೆಯೋ, ಈ ದೇಶಭಕ್ತ ಮಾಧ್ಯಮ, ಪಕ್ಷ ಹಾಗೂ ಸರಕಾರಗಳ ಮೌನ ಅದಕ್ಕಿಂತ ಅಪಾಯಕಾರಿಯಾಗಿವೆ. ಬರಲಿರುವ ದಿನಗಳಲ್ಲಿ ಮಾಧ್ಯಮಗಳು ತಮ್ಮ ದಿವ್ಯ ಮೌನದಿಂದ ಈ ಗಂಭೀರ ಪ್ರಶ್ನೆಯನ್ನು ಬದಿಗೆ ಸರಿಸಬಹುದು ಅಥವಾ ಹಳೆಯ ಹಾಗೂ ಯಶಸ್ವಿ ತಂತ್ರವನ್ನು ಉಪಯೋಗಿಸಿ ಆರೋಪ ಮಾಡಿದ ವ್ಯಕ್ತಿಯ ಮೇಲೆ ವಿರೋಧ ಪಕ್ಷಗಳ ಏಜೆಂಟ್ ಇತ್ಯಾದಿ ಆರೋಪಗಳನ್ನು ಹೊರಿಸಿ ಆರೋಪವನ್ನೇ ಗೌಣಗೊಳಿಸಬಹುದು ಅಥವಾ ಆರೋಪಿಯೇ ಕಣ್ಮರೆಯಾಗಿ ಆರೋಪವೂ ಕಣ್ಮರೆಯಾಗುವಂತೆ ಮಾಡಬಹುದು. ಆದರೆ ಅವು ಯಾವುವೂ ದೇಶಕ್ಕೆದುರಾಗಿರುವ ಸಂಘಪರಿವಾರದ ಬಾಂಬ್ ಭಯೋತ್ಪಾದನೆಯ ಅಪಾಯದ ವಾಸ್ತವವನ್ನು ಅಲ್ಲಗಳೆಯುವುದಿಲ್ಲ. ಏಕೆಂದರೆ ಸಂಘಪರಿವಾರಕ್ಕೂ ಬಾಂಬ್ ಭಯೋತ್ಪಾದನೆಗೂ ಇರುವ ಸಂಬಂಧಗಳು ಈ ಹಿಂದೆಯೂ ಹಲವಾರು ಬಾರಿ ಅಲ್ಲಗಳೆಯಲಾಗದ ಪುರಾವೆಗಳೊಂದಿಗೆ ಬಯಲಿಗೆ ಬಂದಿದೆ.

ಇತ್ತೀಚೆಗೆ ಉದಯ್‌ಪುರದಲ್ಲಿ ಕನ್ಹಯ್ಯ ಲಾಲ್ ಎಂಬ ಟೈಲರ್ ಅನ್ನು ಬೀಭತ್ಸವಾಗಿ ಹತ್ಯೆ ಮಾಡಿದ ಅಟ್ಟಾರಿ ಎಂಬ ಕೊಲೆಗಡುಕ ಬಿಜೆಪಿಯ ಹಾಗೂ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಸಂಸ್ಥಾಪಿತ ಮುಸ್ಲಿಮ್ ಸಂಘರ್ಷ ಸಮಿತಿಯ ಹಾಲಿ ಗಣ್ಯ ಮಾನ್ಯ ಸದಸ್ಯನಾಗಿದ್ದ. ಅದಾದ ನಂತರದಲ್ಲಿ ಜಮ್ಮುವಿನಲ್ಲಿ ಲಷ್ಕರೆ ತಯ್ಯಿಬಾ ಸಂಘಟನೆಯ ಪ್ರಮುಖ ಸದಸ್ಯನೆಂದು ಬಂಧಿತನಾದ ತಾಲಿಬ್ ಜಮ್ಮು ಪ್ರಾಂತದ ಬಿಜೆಪಿಯ ಸಾಮಾಜಿಕ ಜಾಲತಾಣದ ಮುಖ್ಯಸ್ಥನಾಗಿದ್ದ ಇವು ಯಾವುದನ್ನೂ ಬಿಜೆಪಿ ನಿರಾಕರಿಸಿಲ್ಲ! ಇದಕ್ಕೆ ಕೆಲವು ವರ್ಷಗಳ ಮುಂಚೆ ಮೂವರು ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಭಯೋತ್ಪಾದಕರನ್ನು ಗಡಿ ದಾಟಿಸುತ್ತಿದ್ದಾಗ ಬಂಧಿತನಾದ ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿ ದವಿಂದರ್ ಸಿಂಗ್, ಈ ಕೆಲಸ ಮಾಡಲು ತನಗೆ ದಿಲ್ಲಿಯಿಂದ ನೇರ ಮಾರ್ಗದರ್ಶನವಿದೆ ಎಂದು ಹೇಳಿದ್ದ. ಆನಂತರ ಆತನನ್ನು ದಿಢೀರನೆ ಎನ್‌ಐಎ ಬಂಧಿಸಿ ದಿಲ್ಲಿಗೆ ಕರೆತಂದು ಮೀಡಿಯಾದಿಂದ ದೂರವುಳಿಸಿತು. ಈ ದವಿಂದರ್ ಸಿಂಗ್ 2019ರ ಫೆ. 14ರಂದು ಪುಲ್ವಾಮದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಮುನ್ನ ಕೆಲವು ದಿನಗಳವರೆಗೂ ಆ ಪ್ರದೇಶದ ಉಸ್ತುವಾರಿಯಾಗಿದ್ದ. ಆತನ ಭಯೋತ್ಪಾದಕ ಸಂಬಂಧದ ಹಿನ್ನೆಲೆಗೂ, ಪುಲ್ವಾಮ ಸ್ಫೋಟದಲ್ಲಿ ಬಳಸಲಾದ ನೂರಾರು ಕೆಜಿ ಆರ್‌ಡಿಎಕ್ಸ್ ಸ್ಫೋಟಕಗಳು ಕಾಶ್ಮೀರದ ರಕ್ಷಣಾ ಕೋಟೆಯನ್ನು ಭೇದಿಸಿ ಪುಲ್ವಾಮ ತಲುಪಿದ್ದಕ್ಕೂ ಸಂಬಂಧವಿದೆಯೇ ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದ್ದರೂ, ಸರಕಾರ ಅದರ ಬಗ್ಗೆ ಈವರೆಗೆ ಮೌನವಾಗಿದೆ.

ಯಶವಂತ್ ಶಿಂದೆಯ ರೀತಿಯಲ್ಲೇ ಅರೆಸ್ಸೆಸ್‌ನ ಹಿರಿಯ ನಾಯಕನಾಗಿದ್ದ ಸ್ವಾಮಿ ಅಸೀಮಾನಂದ ಎಂಬವರು 2007ರಲ್ಲಿ ಕೋರ್ಟಿನ ಮುಂದೆ ನೀಡಿದ ಪ್ರಮಾಣಿತ ಹೇಳಿಕೆಯಲ್ಲಿ 2004-2007ರ ನಡುವೆ ನಡೆದ ನಾಂದೇಡ್ ಬಾಂಬ್ ಸ್ಫೋಟ, ಮಾಲೆಗಾಂವ್ ಸ್ಫೋಟ, ಹೈದರಾಬಾದ್ ಮಕ್ಕಾ-ಮಸೀದಿ ಸ್ಫೋಟ, ಅಜ್ಮೀರ್ ದರ್ಗಾ ಸ್ಫೋಟ, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಗಳನ್ನು ಮಾಡಿದ್ದು ಸಂಘಪರಿವಾರಕ್ಕೆ ಸೇರಿದ ಭಯೋತ್ಪಾದಕರೇ ಎಂದು ವಿವರವಾದ ಹೇಳಿಕೆಯನ್ನು ನೀಡಿದ್ದರು. ಇಂದು ಬಿಜೆಪಿಯ ಸಂಸದೆಯಾಗಿರುವ ಸಾಧ್ವಿ ಪ್ರಜ್ಞಾಸಿಂಗ್ ಹಾಗೂ ಸೇನೆಯಲ್ಲಿ ಅಧಿಕಾರಿಯಾಗಿರುವ ಕರ್ನಲ್ ಪುರೋಹಿತ್‌ರಂತಹವರೂ ಈ ಬಾಂಬ್ ಭಯೋತ್ಪಾದನೆಯಲ್ಲಿ ಭಾಗಿ ಎಂದು ಒಪ್ಪಿಕೊಂಡಿದ್ದರು. ಅಷ್ಟು ಮಾತ್ರವಲ್ಲ, ಈಗ ಆರೆಸ್ಸೆಸ್‌ನ ಸರಸಂಘ ಚಾಲಕರಾಗಿರುವ ಭಾಗವತ್ ಅವರ ನೇರ ಉಸ್ತುವಾರಿಯಲ್ಲೇ ಈ ಎಲ್ಲಾ ಬಾಂಬ್ ಸ್ಫೋಟಗಳು ನಡೆದವು ಎಂದು ಕೂಡ ಹೇಳಿಕೆ ಇತ್ತಿದ್ದರು. ಆ ನಂತರ ಅವೆಲ್ಲವನ್ನೂ ತಾನು ಪೊಲೀಸರ ಬೆದರಿಕೆಯಿಂದಾಗಿ ಹೇಳಿದೆ ಎಂದು ಉಲ್ಟಾ ಹೊಡೆದರೂ, 2014ರಲ್ಲಿ ‘ದಿ ಕಾರವಾನ್’ ಪತ್ರಿಕೆಗೆ ನೀಡಿದ ಸುದೀರ್ಘ ಸಂದರ್ಶನದಲ್ಲಿ ಮತ್ತೆ ಅವೆಲ್ಲವನ್ನು ನಿಜವೆಂದು ಪುನರುಚ್ಚರಿಸಿದ್ದರು. ಆದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಈ ಆರೋಪಿಗಳೆಲ್ಲರನ್ನೂ ಕಾನೂನು ಬಾಹಿರವಾಗಿ ಬಿಡುಗಡೆ ಮಾಡಲಾಯಿತೇ ವಿನಾ ದೇಶದ ಭದ್ರತೆಯ ವಿಷಯಕ್ಕೆ ಗಂಡಾಂತರಕಾರಿಯಾದ ಈ ವಿಷಯಗಳ ಸತ್ಯಾಸತ್ಯತೆಯ ತನಿಖೆೆಯ ನಾಟಕವನ್ನೂ ನಡೆಸಲಿಲ್ಲ.

ಕೇವಲ ಅಸೀಮಾನಂದರ ಹೇಳಿಕೆಯಲ್ಲ. 2007ರಲ್ಲಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥರಾಗಿದ್ದ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆಯವರೇ ತಮ್ಮ ತನಿಖೆಯಲ್ಲಿ ನಾಂದೇಡ್-ಮಾಲೆಗಾಂವ್ ಸ್ಫೋಟಗಳಲ್ಲಿ ಈ ಸಂಘಟನೆಗಳ ಮತ್ತು ಕಾರ್ಯಕರ್ತರ ಪಾತ್ರಗಳನ್ನು ಪುರಾವೆಯೊಂದಿಗೆ ಸಾಬೀತು ಪಡಿಸಿದ್ದರು. ಆ ಕಾರಣಕ್ಕಾಗಿಯೇ ಪ್ರಜ್ಞಾಸಿಂಗ್, ಕರ್ನಲ್ ಪುರೋಹಿತ್ ಆದಿಯಾಗಿ ಎಲ್ಲರೂ ಜೈಲುಪಾಲಾಗಿದ್ದರು. ಅವರ ಪಾತ್ರದ ಬಗ್ಗೆ ಇದ್ದ ಬಲವಾದ ಪುರಾವೆಗಳಿಂದಾಗಿಯೇ ಕೋರ್ಟುಗಳು ಅವರಿಗೆ ಜಾಮೀನು ನಿರಾಕರಿಸುತ್ತಾ ಬಂದಿದ್ದವು. ಆದರೆ 2008ರಲ್ಲಿ ಬಾಂಬೆಯ ಮೇಲೆ ನಡೆದ ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದಕ ದಾಳಿಯನ್ನು ಪ್ರತಿರೋಧಿಸಲು ಸಜ್ಜಾಗುತ್ತಿದ್ದ ಹೇಮಂತ್ ಕರ್ಕರೆ ನಿಗೂಢ ರೀತಿಯಲ್ಲಿ ಹತರಾದರು. ಹೇಮಂತ್ ಕರ್ಕರೆಯ ಹತ್ಯೆಗೆ ಪಾಕಿಸ್ತಾನ ಭಯೋತ್ಪಾದಕರು ಕಾರಣವೇ ಅಥವಾ ಅವರು ಅದಕ್ಕೆ ಮುಂಚೆ ಬಯಲುಗೊಳಿಸಿದ ಈ ಕೇಸುಗಳು ಕಾರಣವೇ ಎಂಬುದು ಈವರೆಗೂ ಬಗೆಹರಿಯದ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. 2014ರ ನಂತರ ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರದ ನಿಯಂತ್ರಣದಲ್ಲಿರುವ ಎನ್‌ಐಎ ಈ ಆರೋಪಿಗಳ ಮೇಲಿದ್ದ ಕೇಸುಗಳನ್ನು ಸಡಿಲಗೊಳಿಸಿತು. ಇದನ್ನು ಎನ್‌ಐಎ ಪರವಾದ ವಕೀಲೆ ರೋಹಿಣಿ ಸಾಲಿಯಾನ್ ಅವರೇ ಮಾಧ್ಯಮಗಳ ಮುಂದೆ ಬಯಲುಗೊಳಿಸಿ ಕೇಸಿನಿಂದ ಹಿಂದೆ ಸರಿದರು.

ಪುರೋಹಿತ್ ವಾಪಸ್ ಸೈನ್ಯ ಸೇರಿದರು. ಪ್ರಜ್ಞಾಸಿಂಗ್ ಸಂಸತ್ತನ್ನು ಸೇರಿದರು. ಹೀಗೆ ಯಶವಂತ್ ಶಿಂದೆ ಹೇಳಿರುವ ಅಂಶಗಳಲ್ಲಿ ಹೊಸದೇನಿಲ್ಲ. ಅವು ಹಳೆಯ ಸತ್ಯಗಳೇ. ಆದರೆ ದೇಶಕ್ಕೆ ಅಪಾಯಕಾರಿಯಾದ ಸತ್ಯಗಳು. ಈ ಭಯೋತ್ಪಾದನೆಯ ಹಿಂದಿರುವ ಶಕ್ತಿಗಳು ಈಗ ಸರಕಾರದಲ್ಲೂ ಇವೆ. ಅಂದಮೇಲೆ ಈ ಬಾಂಬ್ ಸ್ಫೋಟಗಳಿಂದ ಪ್ರಾಣ ತೆತ್ತ ಅಮಾಯಕರಿಗೆ ನ್ಯಾಯ ಸಿಗುವುದೇ? ಬಾಂಬ್ ಸ್ಫೋಟ ಎಂದರೆ ಇಸ್ಲಾಮ್‌ಭಯೋತ್ಪಾದನೆಯೆಂದು ಹತ್ತಾರು ವರ್ಷಗಳ ಕಾಲ ವಿನಾಕಾರಣ ಜೈಲುಪಾಲಾದ ಅಮಾಯಕರಿಗೆ ನ್ಯಾಯ ಸಿಗುವುದೇ? ಬಾಂಬ್ ಭಯೋತ್ಪಾದನೆಯೆಂಬುದು ಚುನಾವಣಾ ತಂತ್ರವೂ, ಸಮಾಜವನ್ನು ಕೋಮು ಆಧಾರದಲ್ಲಿ ಒಡೆದು ವಿಭಜಿಸುವ ವ್ಯೆಹವೂ ಆಗಿಬಿಟ್ಟರೆ ಈ ದೇಶಕ್ಕೆ ಭವಿಷ್ಯವಿದೆಯೇ? ಪಕ್ಷಕ್ಕಿಂತ, ವ್ಯಕ್ತಿಗಿಂತ ದೇಶ ಮುಖ್ಯ ಎನ್ನುವ ನಿಜವಾದ ದೇಶಭಕ್ತರಾದರೂ ಸರಕಾರಕ್ಕೆ ಮತ್ತು ಸಂಘಪರಿವಾರಕ್ಕೆ ಈ ಪ್ರಶ್ನೆಗಳನ್ನು ಉತ್ತರ ನೀಡುವವರೆಗೆ ಕೇಳಬೇಕಲ್ಲವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News