ಗುಜರಾತ್ ಸ್ಫೋಟ ಪ್ರಕರಣ; ಮರಣ ದಂಡನೆ ಶಿಕ್ಷೆಗೊಳಗಾದ 30 ಮಂದಿ ಮೇಲ್ಮನವಿ
ಅಹ್ಮದಾಬಾದ್: ಗುಜರಾತ್‍ನಲ್ಲಿ 2008ರಲ್ಲಿ ಸಂಭವಿಸಿದ ಸರಣಿ ಸ್ಫೋಟ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆಗೆ ಒಳಗಾಗಿರುವ 30 ಮಂದಿ ಆರೋಪಿಗಳು ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಸಾಂದರ್ಭಿಕ ಸಾಕ್ಷಿಗಳ ಆಧಾರದಲ್ಲಿ ಮರಣ ದಂಡನೆ ವಿಧಿಸುವಂತಿಲ್ಲ ಎಂದು ವಾದಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿ.ಎಂ.ಪಾಂಚೋಲಿ ಮತ್ತು ಎ.ಪಿ.ಠಾಕೂರ್ ಅವರನ್ನು ಒಳಗೊಂಡ ಪೀಠ ಶುಕ್ರವಾರ ವಿಚಾರಣೆಗೆ ಸ್ವೀಕರಿಸಿದೆ.
ಗುಜರಾತ್‍ನಲ್ಲಿ 2008ರಲ್ಲಿ ಸಂಭವಿಸಿದ ಸರಣಿ ಸ್ಫೋಟ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆಗೆ ಒಳಗಾಗಿರುವ 30 ಮಂದಿ ಆರೋಪಿಗಳ ಮೇಲ್ಮನವಿಯನ್ನು ಈಗಾಗಲೇ ರಾಜ್ಯ ಸರ್ಕಾರ, ಶಿಕ್ಷೆ ದೃಢೀಕರಣಕ್ಕೆ ಕೋರಿ ಸಲ್ಲಿಸಿದ ಅರ್ಜಿಯ ಜತೆಗೆ ವಿಚಾರಣೆ ನಡೆಸಲಾಗುತ್ತದೆ. ವಿಚಾರಣಾ ನ್ಯಾಯಾಲಯದ ತೀರ್ಪಿನ ಬಳಿಕ 115 ದಿನಗಳ ವಿಳಂಬವಾಗಿರುವುದನ್ನು ಮನ್ನಿಸಿ ಹೈಕೋರ್ಟ್, ಆರೋಪಿಗಳ ಮನವಿಯನ್ನು ಪುರಸ್ಕರಿಸಿದೆ.
ಗುಜರಾತ್‍ನ ಅಹ್ಮದಾಬಾದ್ ಮತ್ತು ಸೂರತ್ ನಗರಗಳಲ್ಲಿ 2008ರ ಜುಲೈ 26ರಂದು ಸಂಭವಿಸಿದ ಸರಣಿ ಸ್ಫೋಟ ಪ್ರಕರಣಗಳಲ್ಲಿ 56 ಮಂದಿ ಮೃತಪಟ್ಟು, 2000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಸಂಬಂಧ 38 ಮಂದಿಗೆ ಮರಣ ದಂಡನೆ ಮತ್ತು 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕಳೆದ ಫೆಬ್ರುವರಿಯಲ್ಲಿ ವಿಚಾರಣಾ ನ್ಯಾಯಾಲಯ ತೀರ್ಪು ನಿಡಿತ್ತು.
ವಕೀಲರಾದ ಎಂ.ಎಂ.ಶೇಖ್ ಮತ್ತು ಖಾಲೀದ್ ಶೇಖ್ ಅವರ ಮೂಲಕ ಅರ್ಜಿ ಸಲ್ಲಿಕೆಯಾಗಿದೆ. ಮರಣ ದಂಡನೆ ಶಿಕ್ಷೆ ವಿಧಿಸುವುದಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಈ ಅರ್ಜಿಯನ್ನು ತಿರಸ್ಕರಿಸಿರುವ ಹೈಕೋರ್ಟ್, ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು ಎಂದು timesofindia.com ವರದಿ ಮಾಡಿದೆ.