ಉತ್ತರಾಖಂಡ:ಮೇಲ್ಜಾತಿಯ ಮಹಿಳೆಯನ್ನು ಮದುವೆಯಾಗಿದ್ದ ದಲಿತ ವ್ಯಕ್ತಿಯ ಹತ್ಯೆ
ಅಲ್ಮೋರಾ,ಸೆ.3: ಮೇಲ್ಜಾತಿಯ ಮಹಿಳೆಯನ್ನು ಮದುವೆಯಾಗಿದ್ದಕ್ಕೆ ದಲಿತ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ ನಡೆದಿದೆ.ಭಿಕಿಯಾಸಾನ್ ಪಟ್ಟಣದಲ್ಲಿ ಕಾರೊಂದನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಉತ್ತರಾಖಂಡ ಪರಿವರ್ತನ ಪಾರ್ಟಿ (ಯುಪಿಪಿ)ಯ ಸದಸ್ಯ ಜಗದೀಶ ಚಂದ್ರ (39)ರ ಶವ ಪತ್ತೆಯಾಗಿದೆ ಎಂದು ತಹಶೀಲ್ದಾರ ನಿಷಾ ರಾಣಿ ತಿಳಿಸಿದರು. ಜಗದೀಶ ಚಂದ್ರ ಆ.21ರಂದು ರಜಪೂತ ಜಾತಿಗೆ ಸೇರಿದ ಗೀತಾಳನ್ನು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಗೀತಾಳ ಕುಟುಂಬ ಈ ಮದುವೆಯಿಂದ ಅಸಮಾಧಾನಗೊಂಡಿತ್ತು ಎನ್ನಲಾಗಿದೆ. ಗೀತಾಳ ತಾಯಿ,ಮಲತಂದೆ ಮತ್ತು ಮಲಸಹೋದರ ಜಗದೀಶ ಚಂದ್ರರ ಶವವನ್ನು ವಿಲೇವಾರಿ ಮಾಡಲು ಕಾರಿನಲ್ಲಿ ಸಾಗಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದು,ಅವರನ್ನು ಬಂಧಿಸಲಾಗಿದೆ ಎಂದು ನಿಷಾ ರಾಣಿ ತಿಳಿಸಿದರು.
ಗೀತಾಳ ಪೋಷಕರು ಜಗದೀಶ ಚಂದ್ರರನ್ನು ಅಪಹರಿಸಿದ್ದರು ಮತ್ತು ಬಳಿಕ ಮೊಂಡಾದ ಆಯುಧಗಳಿಂದ ಥಳಿಸಿದ್ದರು ಎಂದು ಡಿಐಜಿ ನಿಲೇಶ ಆನಂದ ಭಾರ್ನೆಯವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.ತಮಗೆ ಜೀವ ಬೆದರಿಕೆಯಿದೆ,ಹೀಗಾಗಿ ರಕ್ಷಣೆ ನೀಡುವಂತೆ ಜಗದೀಶ ಚಂದ್ರ ಮತ್ತು ಗೀತಾ ಆ.27ರಂದು ಪೊಲೀಸರಿಗೆ ಲಿಖಿತ ಮನವಿಯನ್ನು ಸಲ್ಲಿಸಿದ್ದರು. ದಂಪತಿಯ ದೂರಿನ ಬಗ್ಗೆ ಆಡಳಿತವು ಕ್ರಮ ಕೈಗೊಂಡಿದ್ದರೆ ಜಗದೀಶ ಚಂದ್ರರನ್ನು ರಕ್ಷಿಸಬಹುದಿತ್ತು ಎಂದು ಯುಪಿಪಿ ನಾಯಕ ಪಿ.ಸಿ.ತಿವಾರಿ ಹೇಳಿದರು.
ಆದರೆ,ಪೊಲೀಸರು ದಂಪತಿಗೆ ಭದ್ರತೆಯನ್ನು ಒದಗಿಸಿದ್ದರು ಎಂದು ಹೇಳಿರುವ ಭಾರ್ನೆ,ಗುರುವಾರ ಜಗದೀಶ ಚಂದ್ರ ಪೊಲೀಸರಿಗೆ ಮಾಹಿತಿ ನೀಡದೇ ಹೊರಗೆ ತೆರಳಿದ್ದರು. ನಿರಂತರವಾಗಿ ಅವರ ಬಗ್ಗೆ ನಿಗಾ ವಹಿಸಿದ್ದೆವು ಅಥವಾ ದಿನದ 24 ಗಂಟೆಯೂ ಭದ್ರತೆಯನ್ನು ಒದಗಿಸಿದ್ದೆವು ಎಂದು ನಾವು ಹೇಳುತ್ತಿಲ್ಲ. ಆದರೆ ಬೆದರಿಕೆಯ ಬಗ್ಗೆ ನಮಗೆ ತಿಳಿದಿತ್ತು ಮತ್ತು ಪೊಲೀಸ್ ಕಾವಲನ್ನು ನಿಯೋಜಿಸಲಾಗಿತ್ತು ಎಂದಿದ್ದಾರೆ.