×
Ad

ವಿವಾಹದ ಆಮಿಷವೊಡ್ಡಿ ಅತ್ಯಾಚಾರ; ನೇಣು ಬಿಗಿದ ಸ್ಥಿತಿಯಲ್ಲಿ ಬುಡಕಟ್ಟು ಬಾಲಕಿಯ ಮೃತದೇಹ ಪತ್ತೆ

Update: 2022-09-04 07:18 IST

ದುಮ್ಕಾ: ವ್ಯಕ್ತಿಯೊಬ್ಬ ವಿವಾಹದ ಆಮಿಷವೊಡ್ಡಿ ಬುಡಕಟ್ಟು ಜನಾಂಗಕ್ಕೆ ಸೇರಿದ 14 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆಪಾದಿಸಲಾಗಿದ್ದು, ಸಂತ್ರಸ್ತ ಬಾಲಕಿಯ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಜಾರ್ಖಂಡ್‍ನ ದುಮ್ಕಾ ಜಿಲ್ಲೆಯಲ್ಲಿ ಈ ಪ್ರಕರಣ ಸಂಭವಿಸಿದೆ.

ತಮ್ಮ ಪುತ್ರಿಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿ ಮರಕ್ಕೆ ನೇತು ಹಾಕಲಾಗಿದೆ ಎಂದು ಸಂತ್ರಸ್ತೆಯ ತಾಯಿ ಮುಫಾಸ್ಸಿಲ್ ಠಾಣೆಯಲ್ಲಿ ದೂರು ನೀಡಿದ್ದಾರೆ. "ಆರೋಪಿಯನ್ನು ಅರ್ಮನ್ ಅನ್ಸಾರಿ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಈತ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ" ಎಂದು ಪೊಲೀಸ್ ಅಧೀಕ್ಷಕ ಅಂಬರ್ ಲಾಕ್ರಾ ಹೇಳಿದ್ದಾರೆ.

ಆರೋಪಿ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 302 (ಕೊಲೆ), ಎಸ್ಸಿ/ಎಸ್ಟಿ ಕಾಯ್ದೆಯ ಸೂಕ್ತ ನಿಬಂಧನೆಗಳು ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಲಾಕ್ರಾ ವಿವರಿಸಿದ್ದಾರೆ. ಘಟನೆ ಬಗ್ಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

"ದುಮ್ಕಾ ಘಟನೆಯಿಂದ ತೀವ್ರ ಬೇಸರವಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೃತ ಬಾಲಕಿಯ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಹಾಗೂ ಈ ಸಂದಿಗ್ಧ ಸ್ಥಿತಿಯಲ್ಲಿ ಅದನ್ನು ಎದುರಿಸುವ ಧೈರ್ಯವನ್ನು ಕುಟುಂಬಕ್ಕೆ ಕರುಣಿಸಲಿ ಎಂದು ಅವರು ಟ್ವೀಟ್ ಮಾಡಿರುವುದಾಗಿ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News