ಬ್ರಿಟನ್ ದೇಶವನ್ನು ಹಿಂದಿಕ್ಕಿ ವಿಶ್ವದ 5ನೇ ದೊಡ್ಡ ಆರ್ಥಿಕತೆಯಾದ ಭಾರತ: ವರದಿ

Update: 2022-09-04 04:33 GMT

ಹೊಸದಿಲ್ಲಿ: ಬ್ರಿಟನ್ ದೇಶವನ್ನು ಹಿಂದಿಕ್ಕಿ ಭಾರತ ಇದೀಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. 2029ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ನಿರೀಕ್ಷೆ ಇದೆ ಎಂದು ಶನಿವಾರ ಬಿಡುಗಡೆ ಮಾಡಲಾದ ವರದಿಯೊಂದು ಅಂದಾಜಿಸಿದೆ.

"2021-22ರ ಕೊನೆಯ ತ್ರೈಮಾಸಿಕದ ಕೊನೆಯ ದಿನ ಇದ್ದ ಡಾಲರ್ ವಿನಿಮಯ ದರದ ಆಧಾರದಲ್ಲಿ ಭಾರತೀಯ ಆರ್ಥಿಕತೆಯ ಗಾತ್ರ 854.7 ಶತಕೋಟಿ ಡಾಲರ್ ಆಗಿದೆ. ಇದೇ ಆಧಾರದಲ್ಲಿ ಬ್ರಿಟನ್ ಆರ್ಥಿಕತೆಯ ಗಾತ್ರ 816 ಶತಕೋಟಿ ಡಾಲರ್ ಆಗಿದೆ ಎಂದು ಬ್ಲೂಮ್‍ಬರ್ಗ್ ನ್ಯೂಸ್ ವರದಿಯಲ್ಲಿ ಹೇಳಿದೆ. ಐಎಂಎಫ್‍ನ ಅಂಕಿ ಅಂಶಗಳು ಮತ್ತು ವಿನಿಮಯ ದರದ ಇತಿಹಾಸವನ್ನು ಆಧರಿಸಿ ಈ ಲೆಕ್ಕಾಚಾರ ಮಾಡಲಾಗಿದೆ ಎಂದು ವರದಿ ಸ್ಪಷ್ಟಪಡಿಸಿದೆ.

ಮಾರ್ಚ್ ತ್ರೈಮಾಸಿಕದ ಬಳಿಕ ಬ್ರಿಟನ್‍ನ ಆರ್ಥಿಕತೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಎರಡನೇ ತ್ರೈಮಾಸಿಕದಲ್ಲಿ ನಗದು ರೂಪದಲ್ಲಿ ಅಲ್ಲಿನ ಜಿಡಿಪಿ ಶೇಕಡ ಒಂದರಷ್ಟು ಹೆಚ್ಚಲಿದ್ದು, ಹಣದುಬ್ಬರ ಜತೆ ಹೊಂದಾಣಿಕೆ ಮಾಡಿದ ಬಳಿಕ ಶೇಕಡ 0.1ರಷ್ಟು ಕುಸಿಯಲಿದೆ. ರೂಪಾಯಿಗೆ ಹೋಲಿಸಿದರೆ ಬ್ರಿಟನ್‍ನ ಪೌಂಡ್ ಕೂಡಾ ಡಾಲರ್ ಎದುರು ಕುಸಿತ ಕಂಡಿದ್ದು, ಈ ವರ್ಷ ರೂಪಾಯಿ ಎದುರು ಪೌಂಡ್ ಶೇಕಡ 8ರಷ್ಟು ಕುಸಿದಿದೆ ಎಂದು ಉಲ್ಲೇಖಿಸಿದೆ.

ಭಾರತ 2021ರ ಡಿಸೆಂಬರ್ ವೇಳೆಗೆ ಬ್ರಿಟನ್ ದೇಶವನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದೆ ಎಂದು ಎಸ್‍ಬಿಐ ಪ್ರತ್ಯೇಕ ವರದಿಯೊಂದರಲ್ಲಿ ಹೇಳಿದೆ. 2014ರಲ್ಲಿ ವಿಶ್ವದ ಜಿಡಿಪಿಯಲ್ಲಿ ಇದ್ದ ಭಾರತದ ಪಾಲು ಶೇಕಡ 2.6ರಿಂದ ಶೇಕಡ 3.5ಕ್ಕೇರಿದೆ. ಇದು 2027ರ ವೇಳೆಗೆ ಶೇಕಡ 4ನ್ನು ದಾಟುವ ನಿರೀಕ್ಷೆ ಇದೆ ಎಂದು ಹೇಳಿರುವುದಾಗಿ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News