ಹೀಗೆ ಮಾಡಿದಲ್ಲಿ ಬಿಜೆಪಿಯನ್ನು 50 ಸ್ಥಾನಗಳಿಗೆ ಸೀಮಿತಗೊಳಿಸಬಹುದು ಎಂದ ಬಿಹಾರ ಸಿಎಂ ನಿತೀಶ್ ಕುಮಾರ್...

Update: 2022-09-04 03:30 GMT

ಹೊಸದಿಲ್ಲಿ: ಎಲ್ಲ ವಿರೋಧ ಪಕ್ಷಗಳು ಒಗ್ಗಟ್ಟಾಗಿ 2024ರ ಚುನಾವಣೆಯಲ್ಲಿ ಹೋರಾಡಿದರೆ ಬಿಜೆಪಿಯನ್ನು ಕೇವಲ 50 ಸ್ಥಾನಗಳಿಗೆ ಸೀಮಿತಗೊಳಿಸಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳುವ ಮೂಲಕ ನಿತೀಶ್ ಕುತೂಹಲ ಮೂಡಿಸಿದ್ದಾರೆ.

ಕಳೆದ ತಿಂಗಳು ಬಿಜೆಪಿ ಜತೆಗಿನ ಸಖ್ಯ ಕಳೆದುಕೊಂಡು ಆರ್‍ಜೆಡಿ ಮತ್ತು ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಿರುವ ನಿತೀಶ್ ಕುಮಾರ್, ಇದುವರೆಗೆ ಪ್ರಧಾನಿ ಹುದ್ದೆ ಆಕಾಂಕ್ಷೆ ಬಗೆಗಿನ ಪ್ರಶ್ನೆಗಳಿಗೆ ನಕಾರಾತ್ಮಕ ಉತ್ತರ ನೀಡುತ್ತಾ ಬಂದಿದ್ದರು. ಆದರೆ ಇದೀಗ ಕುಮಾರ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಇತ್ತೀಚೆಗೆ ಪಾಟ್ನಾದಲ್ಲಿ ನಡೆದ ಜೆಡಿಯು ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಎರಡು ನಿರ್ಣಯಗಳನ್ನು ಆಂಗೀಕರಿಸಲಾಗಿದ್ದು, ಒಂದು ನಿರ್ಣಯದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟಿನ ನಿಟ್ಟಿನಲ್ಲಿ ಶ್ರಮಿಸಲು ನಿತೀಶ್ ಕುಮಾರ್ ಅವರಿಗೆ ಅಧಿಕಾರ ನೀಡಲಾಗಿದೆ ಹಾಗೂ ಇನ್ನೊಂದು ನಿರ್ಣಯದಲ್ಲಿ, ಬಿಜೆಪಿ ಅಧಿಕಾರಾವಧಿಯಲ್ಲಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಆಪಾದಿಸಲಾದೆ.

ಬಿಜೆಪಿ ವಿರೋಧಿ ಪಕ್ಷಗಳ ಮುಖಂಡರನ್ನು ಭೇಟಿ ಮಾಡಲು ದೆಹಲಿಗೆ ತೆರಳುವುದಾಗಿ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಸೋಮವಾರದಿಂದ ನಿತೀಶ್ ಅವರ ಮೂರು ದಿನಗಳ ದೆಹಲಿ ಭೇಟಿ ನಿಗದಿಯಾಗಿದೆ ಎಂದು ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News