ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಯಾವುದೇ ಗಲಭೆ ನಡೆದಿಲ್ಲ: ಸಿಎಂ ಆದಿತ್ಯನಾಥ್

Update: 2022-09-04 07:55 GMT

ಲಕ್ನೊ: ಉತ್ತರ ಪ್ರದೇಶ(Uttar Pradesh) ಮುಖ್ಯಮಂತ್ರಿ ಆದಿತ್ಯನಾಥ್(Adityanath) ಶನಿವಾರ, ರಾಜ್ಯವು ಹೂಡಿಕೆದಾರರಿಗೆ "ಆದ್ಯತೆಯ ತಾಣ"ವಾಗಿದೆ ಎಂದು ಹೇಳಿದ್ದಾರೆ.  "ವ್ಯಾಪಾರಿಗಳು ಮತ್ತು ಉದ್ಯಮಿಗಳ ಭದ್ರತೆಯನ್ನು ಉಲ್ಲಂಘಿಸಲು" ಸರ್ಕಾರವು ಅನುಮತಿಸುವುದಿಲ್ಲ ಎಂದು ಅವರು ಇದೇ ವೇಳೆ ಹೇಳಿದರು.

"ಕಳೆದ ಐದೂವರೆ ವರ್ಷಗಳಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ. ರಾಜ್ಯವು ಭಾರಿ ಹೂಡಿಕೆಗಳನ್ನು ಪಡೆಯುತ್ತಿದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಈಗ ಉತ್ತರ ಪ್ರದೇಶದಲ್ಲಿ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳು ನಿರ್ಮಾಣವಾಗುತ್ತಿವೆ. ಉತ್ತರ ಪ್ರದೇಶವು ಸಂಪೂರ್ಣವಾಗಿ 'ದಂಗೆಮುಕ್ತ' ಆಗಿದೆ" ಎಂದು ಆದಿತ್ಯನಾಥ್ ಅವರು ಬಿಜ್ನೋರ್‌ನಲ್ಲಿ ₹ 267 ಕೋಟಿ ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿಯನ್ನು ಉಲ್ಲೇಖಿಸಿದ ಸಿಎಂ, ತಮ್ಮ ಆಡಳಿತದಲ್ಲಿ ಯಾವುದೇ ಕೋಮು ಗಲಭೆಗಳು ನಡೆದಿಲ್ಲ, ರಾಜ್ಯವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದು ಹೇಳಿದರು. ಉತ್ತರ ಪ್ರದೇಶ ಸರ್ಕಾರವು ಒಂದು ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಎಂಬ ಗುರಿಯನ್ನು ಸಾಧಿಸಲು ಅವಿರತವಾಗಿ ಶ್ರಮಿಸುತ್ತಿದೆ ಎಂದೂ ಅವರು ಹೇಳಿದರು.

ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಉದ್ಯೋಗ ಸೃಷ್ಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರವು ಆದ್ಯತೆಯ ಆಧಾರದ ಮೇಲೆ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

‘‘ಈ ಹಿಂದೆ ಪೊಲೀಸರಿಗೆ ವಸತಿ ಸೌಲಭ್ಯ ಇರಲಿಲ್ಲ. ಈಗ ಪ್ರತಿ ಪೊಲೀಸ್ ಲೈನ್‌ನಲ್ಲಿ ಬಹುಮಹಡಿ ವಸತಿ ಸೌಕರ್ಯಗಳ ಜತೆಗೆ ಅತ್ಯಾಧುನಿಕ ಬ್ಯಾರಕ್‌ಗಳನ್ನು ನಿರ್ಮಿಸಲಾಗುತ್ತಿದೆ. ಇಂದು ಇಲ್ಲಿ ಮಹಿಳಾ ಹಾಸ್ಟೆಲ್‌ ನಿರ್ಮಾಣ ಪೂರ್ಣಗೊಂಡಿದೆ. ಪೊಲೀಸ್ ಸಿಬ್ಬಂದಿಗೂ ಉತ್ತಮ ವಸತಿ ಸೌಲಭ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳುತ್ತಿದ್ದೇವೆ" ಎಂದು ಆದಿತ್ಯನಾಥ್ ಹೇಳಿದರು.

ಇದನ್ನೂ ಓದಿ: ದೇಶದಲ್ಲಿ ಶೇ.11 ಮಕ್ಕಳ ಜನನ ನೋಂದಣಿಯೇ ಆಗಿಲ್ಲ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News