×
Ad

ದುಬಾರಿ ಎಲ್ಪಿಜಿ ಸಿಲಿಂಡ್ರ್ ಗಳ ಮೇಲೆ ಪ್ರಧಾನಿ ಪೋಸ್ಟರ್

Update: 2022-09-04 19:30 IST
Photo: Twitter/@krishanKTRS

ಹೈದರಾಬಾದ್,ಸೆ.4: ಅಡಿಗೆ ಅನಿಲದ ದುಬಾರಿ ಬೆಲೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಣೆಯಾಗಿಸಿರುವ ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್ ಬೆಂಬಲಿಗರು ಶನಿವಾರ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಅವರ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಿರುಗೇಟು ನೀಡಿದ್ದಾರೆ.

ಶುಕ್ರವಾರ ಕಮ್ಮರೆಡ್ಡಿ ಜಿಲ್ಲೆಯ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಮೋದಿಯವರ ಚಿತ್ರ ಅಥವಾ ಫ್ಲೆಕ್ಸ್ ಬೋರ್ಡ್‌ನ್ನು ಹಾಕದಿದ್ದಕ್ಕಾಗಿ ಜಿಲ್ಲಾಧಿಕಾರಿ ಜಿತೇಶ ಪಾಟೀಲರನ್ನು ತರಾಟೆಗೆತ್ತಿಕೊಂಡಿದ್ದ ಸೀತಾರಾಮನ್ ಅವರನ್ನು ಟಿಆರ್‌ಎಸ್ ಕಾರ್ಯಕರ್ತರು ಈ ಕ್ರಮದ ಮೂಲಕ ಗೇಲಿ ಮಾಡಿದ್ದಾರೆ.

ಟಿಆರ್‌ಎಸ್‌ನ ಸಾಮಾಜಿಕ ಮಾಧ್ಯಮ ಸಂಚಾಲಕ ಎಂ.ಕೃಷಾಂಕ್ ಅವರು ಶನಿವಾರ ಟ್ವಟರ್‌ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದು,ನಗುಮುಖದ ಮೋದಿ ಚಿತ್ರದೊಂದಿಗೆ ‘ರೂ.1105’ ಎಂದು ಬರೆಯಲಾಗಿರುವ ಪೋಸ್ಟರ್‌ಗಳನ್ನು ಅಂಟಿಸಿದ ಎಲ್‌ಪಿಜಿ ಸಿಲಿಂಡರ್‌ಗಳನ್ನು ಈ ವೀಡಿಯೊದಲ್ಲಿ ನೋಡಬಹುದು. 1105 ರೂ.ಎಲ್‌ಪಿಜಿ ಸಿಲಿಂಡರ್‌ನ ಪ್ರಸ್ತುತ ದರವಾಗಿದೆ.

‘ನಿಮಗೆ ಮೋದಿಜಿಯವರ ಚಿತ್ರಗಳು ಬೇಕಾಗಿದ್ದವು,ಇಲ್ಲಿವೆ ನೋಡಿ ಸೀತಾರಾಮನ್‌ಜಿ’ ಎಂದೂ ಟ್ವೀಟ್‌ನಲ್ಲಿ ಬರೆಯಲಾಗಿದೆ.

ಟಿಆರ್‌ಎಸ್ ನಾಯಕರು ರಾಜ್ಯಾದ್ಯಂತ,ವಿಶೇಷವಾಗಿ ವಿಧಾನಸಭಾ ಉಪಚುನಾವಣೆಗಳಲ್ಲಿ ಟಿಆರ್‌ಎಸ್ ಎದುರು ಬಿಜೆಪಿ ಕಣದಲ್ಲಿರುವ ದುಬ್ಬಾಕ ಮತ್ತು ಮನುಗೋಡುನಂತಹ ಕ್ಷೇತ್ರಗಳಲ್ಲಿ ಎಲ್‌ಪಿಜಿ ಬೆಲೆಏರಿಕೆ ವಿಷಯವನ್ನು ಎತ್ತುತ್ತಿದ್ದಾರೆ.

  ದೇಶದಲ್ಲಿಯೇ ತೆಲಂಗಾಣದಲ್ಲಿ ಎಲ್‌ಪಿಜಿ ಬೆಲೆಗಳು ಅತ್ಯಧಿಕವಾಗಿವೆ ಮತ್ತು ಇದಕ್ಕೆ ಟಿಆರ್‌ಎಸ್ ನಾಯಕರು ಮೋದಿ ಸರಕಾರವನ್ನು ಹೊಣೆಯಾಗಿಸಿದ್ದಾರೆ.

 ಬಿಜೆಪಿಯ ಲೋಕಸಭಾ ಪ್ರವಾಸ ಯೋಜನೆಯಡಿ ಕೇಂದ್ರ ಸರಕಾರದ ಆರ್ಥಿಕ ನೆರವಿನ ವಿವಿಧ ಯೋಜನೆಗಳ ಪರಿಶಿಲನೆಗಾಗಿ ತೆಲಂಗಾಣಕ್ಕೆ ಎರಡು ದಿನಗಳ ಭೇಟಿ ನೀಡಿದ್ದ ಸೀತಾರಾಮನ್ ಕಮ್ಮರೆಡ್ಡಿ ಜಿಲ್ಲೆಯ ಬುರ್ಕುರ್ ಗ್ರಾಮದಲ್ಲಿಯ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಪ್ರಧಾನಿ ಚಿತ್ರವಿಲ್ಲದ್ದಕ್ಕೆ ಜಿಲ್ಲಾಧಿಕಾರಿಯನ್ನು ತರಾಟೆಗೆತ್ತಿಕೊಂಡಿದ್ದರು. ಕೇಂದ್ರ ಸರಕಾರದ ಯೋಜನೆಯಡಿ ಪಡಿತರ ಅಕ್ಕಿಯನ್ನು ವಿತರಿಸುವ ಯಾವುದೇ ಅಂಗಡಿಯಲ್ಲಿ ಪ್ರಧಾನಿ ಚಿತ್ರವಿರುವುದು ಕಡ್ಡಾಯವಾಗಿದೆ ಎಂದು ಹೇಳಿದ್ದ ಅವರು,ಇದು ಜಿಲ್ಲಾಧಿಕಾರಿಗಳ ಹೊಣೆಗಾರಿಕೆಯಾಗಿದೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News