ಬಾಲಾಪರಾಧಿಗಳಿಗೆ ಊಟದಲ್ಲಿ ಮೊಟ್ಟೆ, ಕೋಳಿ ಮಾಂಸ ಇಲ್ಲ: ಮಧ್ಯಪ್ರದೇಶ ಗೃಹ ಸಚಿವ
ಭೋಪಾಲ (ಮಧ್ಯಪ್ರದೇಶ), ಸೆ. 4: ರಾಜ್ಯದಲ್ಲಿ ಬಾಲಾಪರಾಧಿ ಕೇಂದ್ರಗಳಲ್ಲಿ ಊಟದಲ್ಲಿ ಮೊಟ್ಟೆ, ಕೋಳಿ ಮಾಂಸ ನೀಡಲಾಗುವುದಿಲ್ಲ ಎಂದು ಗೃಹ ಸಚಿವ ನರೋತ್ತಮ ಮಿಶ್ರಾ (Narottam Mishra) ಅವರು ಹೇಳಿದ್ದಾರೆ.
ಬಾಲಾಪರಾಧಿ ಕೇಂದ್ರಗಳಲ್ಲಿ ಮೊಟ್ಟೆ ಹಾಗೂ ಕೋಳಿ ಮಾಂಸ ನೀಡಲಾಗುವುದು ಎಂದು ಮಧ್ಯಪ್ರದೇಶ (Madhya Pradesh) ಸರಕಾರ ಗಝೆಟ್ ಅಧಿಸೂಚನೆ ಹೊರಡಿಸಿದ 10 ದಿನಗಳ ಬಳಿಕ ಸಚಿವರು ಈ ಹೇಳಿಕೆ ನೀಡಿದ್ದಾರೆ.
ರಾಜ್ಯದ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಜಾರಿಗೊಳಿಸಿದ ಮಧ್ಯಪ್ರದೇಶ ಬಾಲ ನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ನಿಯಮ 2002ರ ಅಡಿಯ ಅಧಿಸೂಚನೆಯಲ್ಲಿ ರಾಜ್ಯದ ಬಾಲಾಪರಾಧಿ ಕೇಂದ್ರಗಳಲ್ಲಿ ನೀಡುವ ಊಟದ ಪಟ್ಟಿಯಲ್ಲಿ ಮೊಟ್ಟೆ ಹಾಗೂ ಕೋಳಿ ಮಾಂಸ ಇದೆ.
ಈ ಅಧಿಸೂಚನೆಯನ್ನು ಆಗಸ್ಟ್ 25ರಂದು ಹೊರಡಿಸಲಾಗಿತ್ತು. ಇದು ಸರಕಾರದ ಮುದ್ರಣ ಹಾಗೂ ಲೇಖನ ಸಾಮಗ್ರಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ಅಧಿಸೂಚನೆಯ ಕುರಿತು ಸುದ್ದಿಗಾರರು ರವಿವಾರ ಪ್ರಶ್ನಿಸಿದಾಗ ನರೋತ್ತಮ ಮಿಶ್ರಾ ಅವರು, ‘‘ಮಧ್ಯಪ್ರದೇಶದಲ್ಲಿ ಇದಕ್ಕೆ ಅವಕಾಶ ನೀಡುವುದಿಲ್ಲ. ಈ ವಿಷಯದ ಕುರಿತು ಗೊಂದಲ ಇದೆ. ರಾಜ್ಯ ಸರಕಾರದ ಮುಂದೆ ಇಂತಹ ಪ್ರಸ್ತಾವಗಳು ಬಾಕಿ ಇಲ್ಲ. ಇಂತಹ ವಿಷಯಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವುದಿಲ್ಲ’’ ಎಂದಿದ್ದಾರೆ.