ಶ್ರೀಲಂಕಾದ ರೀತಿಯ ಬಿಕ್ಕಟ್ಟು ಬಾಂಗ್ಲಾಕ್ಕೆ ಎದುರಾಗದು: ಶೇಖ್ ಹಸೀನಾ
ಢಾಕಾ, ಸೆ.4: ಕೋವಿಡ್-19 ಸಾಂಕ್ರಾಮಿಕದ ಪ್ರಹಾರ ಮತ್ತು ಉಕ್ರೇನ್‌ನಲ್ಲಿನ ಸಂಘರ್ಷದ ಹೊರತಾಗಿಯೂ ಬಾಂಗ್ಲಾದೇಶದ ಆರ್ಥಿಕತೆ ಸದೃಢವಾಗಿದ್ದು , ಯಾವುದೇ ಸಾಲ ಪಡೆಯುವಾಗಲೂ ತನ್ನ ಸರಕಾರ ಗರಿಷ್ಟ ಮಟ್ಟದ ಶೃದ್ಧೆ ವಹಿಸುತ್ತಿರುವುದರಿಂದ ಶ್ರೀಲಂಕಾಕ್ಕೆ ಎದುರಾದ ಬಿಕ್ಕಟ್ಟು ಬಾಂಗ್ಲಾದೇಶಕ್ಕೆ ಎದುರಾಗದು ಎಂದು ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ಪ್ರಸಕ್ತ ಸಂದರ್ಭದಲ್ಲಿ ಬಾಂಗ್ಲಾಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೇ ಸವಾಲುಗಳ ಸರಮಾಲೆ ಎದುರಾಗಿದೆ. ಆದರೂ ನಮ್ಮ ಅರ್ಥವ್ಯವಸ್ಥೆ ಈಗಲೂ ಬಲಿಷ್ಟವಾಗಿದೆ. ಕೋವಿಡ್ ಸಾಂಕ್ರಾಮಿಕ, ಆ ಬಳಿಕ ಉಕ್ರೇನ್-ರಶ್ಯಾ ಯುದ್ಧ. ಇವೆಲ್ಲಾ ಖಂಡಿತಾ ಪರಿಣಾಮ ಬೀರಿದೆ. ಆದರೆ ಬಾಂಗ್ಲಾ ಯಾವತ್ತೂ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿದೆ. ಆದ್ದರಿಂದ ನಮ್ಮ ಸಾಲದ ಪ್ರಮಾಣ ಅತ್ಯಂತ ಕನಿಷ್ಟವಾಗಿದೆ. ಶ್ರೀಲಂಕಾಕ್ಕೆ ಹೋಲಿಸಿದರೆ ನಮ್ಮ ಆರ್ಥಿಕ ಪಥ ಮತ್ತು ಅಭಿವೃದ್ಧಿ ಯೋಜಿತ ರೀತಿಯಲ್ಲಿ ಸಾಗುತ್ತಿದೆ. ಯೋಜಿತ ವಿಧಾನದಿಂದಾಗಿ ದೇಶವು ಆರ್ಥಿಕ ಕ್ಷೇತ್ರದಲ್ಲಿ ಸುರಕ್ಷಿತವಾಗಿದೆ. ಯಾವುದೇ ಯೋಜನೆಯಿಂದ ಪ್ರಯೋಜನ ಇದೆ ಎಂದು ಖಾತರಿಗೊಂಡ ಬಳಿಕವೇ ಯೋಜನೆಗೆ ಸಾಲ ಪಡೆಯಲಾಗುತ್ತಿದೆ ಎಂದವರು ಹೇಳಿದ್ದಾರೆ.
ಸಾಲ ಪಡೆಯುವ ಬಗ್ಗೆ ಸರಕಾರ ನಿರ್ಧರಿಸುವಾಗ, ಆ ಯೋಜನೆ ಪೂರ್ಣಗೊಂಡರೆ ದೇಶಕ್ಕೇನು ದೊರಕಲಿದೆ , ನಮ್ಮ ಆರ್ಥಿಕತೆ ಹೇಗೆ ಅಭಿವೃದ್ಧಿ ಹೊಂದಲಿದೆ. ಜನರಿಗೆ ಯಾವ ರೀತಿ ಪ್ರಯೋಜನವಾಗಲಿದೆ ಎಂಬುದಕ್ಕೆ ಆದ್ಯತೆ ನೀಡಲಾಗುತ್ತದೆ. ಹಾಗೆಯೇ ಅನಗತ್ಯ ಯೋಜನೆಗಳಿಗೆ ಹಣ ವ್ಯಯಿಸುವುದಿಲ್ಲ. ಅತ್ಯಂತ ಕ್ರಮಬದ್ಧವಾದ ರೀತಿಯಲ್ಲಿ ಯೋಜನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲೂ ಸರಕಾರ ಸ್ಪಷ್ಟವಾದ ಕಾರ್ಯನೀತಿ ಹೊಂದಿತ್ತು. ಗ್ರಾಮಗಳ ಮಟ್ಟದವರೆಗೂ ಎಲ್ಲಾ ರೀತಿಯ ಬೆಂಬಲವನ್ನು ಒದಗಿಸಿದ್ದೇವೆ. ಸಾಧ್ಯವಾದಷ್ಟು ಹೆಚ್ಚು ಬೆಳೆಯುವಂತೆ ಜನರನ್ನು ಪ್ರೋತ್ಸಾಹಿಸಿದ್ದೇವೆ. ಆಹಾರ ಧಾನ್ಯಗಳಿಗಾಗಿ ಇತರರನ್ನು ಅವಲಂಬಿಸಬಾರದು ಎಂಬ ದೃಢ ನಿರ್ಧಾರ ನಮ್ಮದಾಗಿತ್ತು ಎಂದವರು ಹೇಳಿದರು.