×
Ad

ಗಾಝಾ: 5 ಪೆಲೆಸ್ತೀನಿಯರನ್ನು ಗಲ್ಲಿಗೇರಿಸಿದ ಹಮಾಸ್

Update: 2022-09-04 23:27 IST
Photo: AP

ಗಾಝಾ, ಸೆ.4: ಗಾಝಾದಲ್ಲಿ ಆಡಳಿತ ನಡೆಸುವ ಹಮಾಸ್ ರವಿವಾರ 5 ಪೆಲೆಸ್ತೀನಿಯರನ್ನು ಗಲ್ಲಿಗೇರಿಸಿದೆ. ಇವರಲ್ಲಿ ಇಬ್ಬರು ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪ ಎದುರಿಸುತ್ತಿದ್ದರು ಎಂದು ಆಂತರಿಕ ಸಚಿವಾಲಯ ಹೇಳಿದೆ.

ಇದು 2017ರ ಬಳಿಕ ಪೆಲೆಸ್ತೀನಿಯನ್ ಪ್ರದೇಶದಲ್ಲಿ ನಡೆದಿರುವ ಪ್ರಥಮ ಮರಣದಂಡನೆ ಪ್ರಕರಣವಾಗಿದೆ. ಈ ಹಿಂದೆ ಗಾಝಾದಲ್ಲಿ ನಡೆಸಲಾಗಿದ್ದ ಮರಣದಂಡನೆ ಪ್ರಕರಣಗಳ ಬಗ್ಗೆ ಮಾನವ ಹಕ್ಕು ಸಂಘಟನೆಗಳಿಂದ ವ್ಯಾಪಕ ಟೀಕೆ ಮತ್ತು ಖಂಡನೆ ವ್ಯಕ್ತವಾಗಿತ್ತು. ರವಿವಾರ ಮರಣದಂಡನೆಗೆ ಗುರಿಯಾದವರಲ್ಲಿ ಮೂವರು ಕೊಲೆ ನಡೆಸಿದ ಅಪರಾಧಿಗಳಾಗಿದ್ದರೆ, ಇಬ್ಬರು ಇಸ್ರೇಲ್ ಪರ ಬೇಹುಗಾರಿಕೆ ನಡೆಸುತ್ತಿದ್ದ ಅಪರಾಧಿಗಳು ಎಂದು ಮೂಲಗಳು ಹೇಳಿವೆ.

ಎಲ್ಲಾ ಕಾನೂನು ಪ್ರಕ್ರಿಯೆಗಳ ಬಳಿಕ ಮರಣದಂಡನೆ ಪ್ರಕ್ರಿಯೆ ನಡೆದಿದೆ. ಎಲ್ಲಾ ಅಪರಾಧಿಗಳಿಗೂ ತಮ್ಮನ್ನು ಸಮರ್ಥಿಸಿಕೊಳ್ಳಲು ಸಂಪೂರ್ಣ ಅವಕಾಶ ನೀಡಿದ ಬಳಿಕ ಅಂತಿಮ ಆದೇಶ ಜಾರಿಯಾಗಿದ್ದು ಅದನ್ನು ಕಡ್ಡಾಯ ಪಾಲಿಸಬೇಕಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಮರಣದಂಡನೆ ಶಿಕ್ಷೆಯನ್ನು ಖಂಡಿಸಿರುವ ಪೆಲೆಸ್ತೀನಿಯನ್ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ, ಈ ಶಿಕ್ಷೆಯನ್ನು ಅಂತ್ಯಗೊಳಿಸುವಂತೆ ಹಮಾಸ್ ಮತ್ತು ಪೆಲೆಸ್ತೀನಿಯನ್ ಅಥಾರಿಟಿ(ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಸೀಮಿತ ಸ್ವ-ಆಡಳಿತ ನಡೆಸುತ್ತಿದೆ)ಯನ್ನು ಆಗ್ರಹಿಸಿವೆ.

ಪೆಲೆಸ್ತೀನಿಯನ್ ಕಾನೂನು ಪ್ರಕಾರ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಮರಣದಂಡನೆ ಶಿಕ್ಷೆಗೆ ಸಂಬಂಧಿಸಿ ಅಂತಿಮ ನಿರ್ಣಯ ಕೈಗೊಳ್ಳಬೇಕು. ಆದರೆ, 2007ರಲ್ಲಿ ಹಮಾಸ್ ಸಂಘಟನೆ ಗಾಝಾದ ನಿಯಂತ್ರಣವನ್ನು ತಮ್ಮ ವಶಕ್ಕೆ ಪಡೆದ ಬಳಿಕ ಅಬ್ಬಾಸ್ ಗಾಝಾ ಪ್ರದೇಶದ ಮೇಲೆ ಯಾವುದೇ ಹಿಡಿತ ಹೊಂದಿಲ್ಲ. 2007ರಿಂದ ಹಮಾಸ್ ಆಡಳಿತದ ನ್ಯಾಯಾಲಯಗಳು ಹಲವಾರು ಪೆಲೆಸ್ತೀನೀಯರನ್ನು ಮರಣದಂಡನೆ ಶಿಕ್ಷೆಗೆ ಒಳಪಡಿಸಿವೆ ಎಂದು ಮಾನವ ಹ್ಕು ಸಂಘಟನೆಗಳು ಮಾಹಿತಿ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News