ಇಂದೋರ್ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆಯಿಂದ ಯುವಕ ಮೃತ್ಯು ಪ್ರಕರಣ; 5 ಪೊಲೀಸರ ಅಮಾನತು

Update: 2022-09-05 02:44 GMT

ಇಂದೋರ್: ಇಂದೋರ್ ಜಿಲ್ಲಾ ಪೊಲೀಸರು ಬಂಧಿಸಿ ಕಸ್ಟಡಿಯಲ್ಲಿ ಇರಿಸಿಕೊಂಡಿದ್ದ 19 ವರ್ಷದ ಯುವಕನೊಬ್ಬ ಶನಿವಾರ ಪೊಲೀಸರು ನೀಡಿದ ಚಿತ್ರಹಿಂಸೆಯಿಂದ ಕಸ್ಟಡಿಯಲ್ಲಿ ಮೃತಪಟ್ಟಿದ್ದಾನೆ ಎಂದು ಆಪಾದಿಸಲಾಗಿದೆ.

ಈ ಸಂಬಂಧ ಮೂವರು ಅಧಿಕಾರಿಗಳು ಸೇರಿದಂತೆ ಐದು ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಇದು ಮಧ್ಯಪ್ರದೇಶದಲ್ಲಿ ನಾಲ್ಕು ದಿನಗಳಲ್ಲಿ ವರದಿಯಾಗಿರುವ ಎರಡನೇ ಕಸ್ಟಡಿ ಸಾವಿನ ಪ್ರಕರಣವಾಗಿದೆ. ಆಗಸ್ಟ್ 30ರಂದು ದೇವಸ್‍ನಲ್ಲಿ ಪೊಲೀಸರು ಥಳಿಸಿದ್ದರಿಂದ ವ್ಯಾಪಾರಿಯೊಬ್ಬರು ಮೃತಪಟ್ಟಿದ್ದರು. ಎರಡೂ ಪ್ರಕರಣಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಯುತ್ತಿದೆ.

ಡಕಾಯಿತಿ ನಡೆಸಲು ಹೊಂಚು ಹಾಕುತ್ತಿದ್ದ ಆರೋಪದಲ್ಲಿ ಅರ್ಜುನ್ ಸಿಂಗಾರೆ ಎಂಬ ಯುವಕನ್ನು ಹಾಗೂ ಇತರ ಕೆಲವರನ್ನು ಬಂಧಿಸಲಾಗಿತ್ತು ಎಂದು ಇಂದೋರ್ ಗ್ರಾಮೀಣ ಎಸ್ಪಿ ಭಗವತ್ ಸಿಂಗ್ ವಿರಾಡೆ ಹೇಳಿದ್ದಾರೆ. ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲು ಆತನನ್ನು ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ಆತನನ್ನು ಮತ್ತೆ ಮನೆಯಲ್ಲಿ ಬಂಧಿಸಲಾಗಿತ್ತು. ತಡ ರಾತ್ರಿ ಆತನ ಆರೋಗ್ಯ ಸ್ಥಿತಿ ಹದಗೆಡಲಾರಂಭಿಸಿದ್ದು, ಮನ್‍ಪುರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ಎಂವೈ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ವೇಳೆ ಆತ ಮೃತಪಟ್ಟಿದ್ದಾನೆ ಎಂದು ಅವರು ವಿವರಿಸಿದ್ದರೆ. ಆದರೆ ಪೊಲೀಸರು ಅಮಾನುಷವಾಗಿ ಥಳಿಸಿದ್ದರಿಂದ ಯುವಕ ಮೃತಪಟ್ಟಿದ್ದಾನೆ ಎಂದು ಕುಟುಂಬದವರು ದೂರಿದ್ದಾರೆ ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News