ಉತ್ತರ ಪ್ರದೇಶ: ತನ್ನ ಬೈಕ್ ಮುಟ್ಟಿದ್ದಕ್ಕಾಗಿ ದಲಿತ ಬಾಲಕನನ್ನು ಥಳಿಸಿದ್ದ ಮುಖ್ಯೋಪಾಧ್ಯಾಯನ ಅಮಾನತು

Update: 2022-09-05 13:45 GMT

ವಾರಣಾಸಿ (ಉ.ಪ್ರ)(Uttar Pradesh): ತನ್ನ ಬೈಕ್‌ನ್ನು ಮುಟ್ಟಿದ್ದಕ್ಕಾಗಿ ಆರನೇ ತರಗತಿಯ ದಲಿತ(Dalit) ವಿದ್ಯಾರ್ಥಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದ ಬಲಿಯಾದ ಪ್ರಾಥಮಿಕ ಶಾಲೆಯೊಂದರ ಮುಖ್ಯೋಪಾಧ್ಯಾಯರನ್ನು(Headmaster) ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು timesofindia ವರದಿ ಮಾಡಿದೆ.

ಘಟನೆಯಿಂದ ಕ್ರುದ್ಧರಾಗಿದ್ದ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದ ಬಳಿಕ ಪ್ರಾಥಮಿಕ ಶಿಕ್ಷಣಾಧಿಕಾರಿ ಮಣಿರಾಮ ಸಿಂಗ್ ಅವರು ಮುಖ್ಯೋಪಾಧ್ಯಾಯ ಕೃಷ್ಣಮೋಹನ ಶರ್ಮಾರನ್ನು ವಜಾಗೊಳಿಸಿದ್ದಾರೆ ಮತ್ತು ಘಟನೆಯ ಕುರಿತು ತನಿಖೆಗಾಗಿ ಅಧಿಕಾರಿಗಳ ತಂಡವೊಂದನ್ನು ರಚಿಸಿದ್ದಾರೆ.

ಬ್ಲಾಕ್ ಶಿಕ್ಷಣಾಧಿಕಾರಿಯ ಪ್ರಾಥಮಿಕ ವರದಿಯ ಆಧಾರದಲ್ಲಿ ಶರ್ಮಾರನ್ನು ಅಮಾನತುಗೊಳಿಸಲಾಗಿದೆ. ವಿವರವಾದ ತನಿಖೆಗಾಗಿ ಅಧಿಕಾರಿಗಳ ತಂಡವೊಂದನ್ನು ರಚಿಸಿದ್ದು, ತನಿಖಾ ವರದಿ ಕೈಸೇರಿದ ಬಳಿಕ ಶರ್ಮಾರ ವಿರುದ್ಧ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಸಿಂಗ್ ತಿಳಿಸಿದರು.

ಪ್ರಾಥಮಿಕ ತನಿಖಾ ವರದಿಯಂತೆ ಶುಕ್ರವಾರ ಬಲಿಯಾದ ನಗರಾ ಪ್ರದೇಶದ ರಣವುಪುರದಲ್ಲಿನ ಪ್ರಾಥಮಿಕ ಶಾಲೆಯ ಮಧ್ಯಂತರ ವಿರಾಮದ ವೇಳೆ ಶಾಲಾವರಣದಲ್ಲಿ ನಿಲ್ಲಿಸಲಾಗಿದ್ದ ಶರ್ಮಾರ ಬೈಕ್‌ನ್ನು ಮುಟ್ಟಿದ್ದ. ಆತನನ್ನು ಹಿಡಿದು ಥಳಿಸಿದ್ದ ಶರ್ಮಾ ತನ್ನ ಕಚೇರಿಗೆ ಎಳೆದೊಯ್ದಿದ್ದರು. ಕಬ್ಬಿಣದ ಸರಳಿನಿಂದಲೂ ಶರ್ಮಾ ತನಗೆ ಥಳಿಸಿದ್ದರು ಎಂದು ಬಾಲಕ ಹೇಳಿದ್ದಾನೆ.

ಬಳಿಕ ಬಾಲಕನ ಗಾಯಗಳಿಗೆ ಮುಲಾಮು ಸವರಿದ್ದ ಶರ್ಮಾ ಆತನನ್ನು ಬಿಟ್ಟಿದ್ದರು. ಭೀಮಪುರ ಪ್ರದೇಶದ ಕೌವಾಪುರದಲ್ಲಿಯ ತನ್ನ ಮನೆಗೆ ಮರಳಿದ್ದ ಬಾಲಕ ಗಾಯಗಳನ್ನು ಹೆತ್ತವರಿಗೆ ತೋರಿಸಿ ಘಟನೆಯ ಬಗ್ಗೆ ವಿವರಿಸಿದ್ದ.

ಕುಪಿತ ಗ್ರಾಮಸ್ಥರು ಶನಿವಾರ ಶಾಲೆಯ ಪ್ರವೇಶದ್ವಾರಗಳಿಗೆ ಬೀಗ ಜಡಿದು ಬೃಹತ್ ಪ್ರತಿಭಟನೆಯನ್ನು ನಡೆಸಿದ್ದರು. ಶರ್ಮಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವವರೆಗೆ ಶಾಲೆಯನ್ನು ಆರಂಭಿಸಲು ತಾವು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದರು. ಸ್ಥಳಕ್ಕೆ ತಲುಪಿದ್ದ ಬ್ಲಾಕ್ ಶಿಕ್ಷಣಾಧಿಕಾರಿ ತನಿಖೆ ನಡೆಸಿ ಸಿಂಗ್‌ಗೆ ವರದಿ ಸಲ್ಲಿಸಿದ್ದರು.

ಶರ್ಮಾರನ್ನು ಅಮಾನತುಗೊಳಿಸಿದ ಬಳಿಕವೇ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂದೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪಾಕ್ ಎದುರು ಭಾರತದ ಸೋಲನ್ನು ವ್ಯಾಖ್ಯಾನಿಸಿ ಟೀಕೆಗೊಳಗಾದ ಸುಧೀರ್ ಚೌಧರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News