ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಬಂಧನವಾಗಿ ನಾಲ್ಕು ವರ್ಷ: ಪತ್ನಿ ಶ್ವೇತಾ ಭಟ್‌ ಭಾವನಾತ್ಮಕ ಪತ್ರ

Update: 2022-09-05 14:39 GMT
ಸಂಜೀವ್‌ ಭಟ್‌ ಮತ್ತು ಶ್ವೇತಾ ಸಂಜೀವ್ ಭಟ್ (Photo: Facebook)

ಅಹಮದಾಬಾದ್: ಗುಜರಾತಿನ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ (Sanjiv Bhatt) ಅವರನ್ನು ಸರ್ಕಾರವು ಬಂಧಿಸಿ ನಾಲ್ಕು ವರ್ಷಗಳು ಕಳೆದಿದ್ದು, ಇದುವರೆಗೂ ಅವರು ಜೈಲಿನಲ್ಲೇ ಇದ್ದಾರೆ. ಸಂಜೀವ್‌ ಭಟ್‌ ಸೇರಿದಂತೆ ಹಲವು ರಾಜಕೀಯ ಕೈದಿಗಳು ಸರಿಯಾದ ವಿಚಾರಣೆಯೂ ಇಲ್ಲದೆ ಬಂಧನದಲ್ಲಿರುವ ಕುರಿತಂತೆ ಟೀಕೆಗಳು ವ್ಯಕ್ತವಾಗುತ್ತಿದೆ.

ಈ ನಡುವೆ, ಸಂಜೀವ್‌ ಭಟ್‌ ಪತ್ನಿ, ಶ್ವೇತಾ ಸಂಜೀವ್ ಭಟ್ ಫೇಸ್‌ಬುಕ್‌ ಮೂಲಕ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದು, ಪ್ರಪಂಚಕ್ಕೆ ಸಂಜೀವ್‌ ಬಂಧನವಾಗಿ ನಾಲ್ಕು ವರ್ಷಗಳಾಗಿದೆ, ಆದರೆ ನಮಗೆ (ಕುಟುಂಬಕ್ಕೆ) ಇದು 1462 ದಿನಗಳು/35,088 ಗಂಟೆಗಳು ಎಂದಿದ್ದಾರೆ.

ಸಂಜೀವ್‌ ಭಟ್‌ ಕುಟುಂಬದೊಂದಿಗೆ ಇರುವ ಚಿತ್ರವನ್ನು ಸಂಜೀವ್‌ ಭಟ್‌ ಅವರ ಫೇಸ್‌ಬುಕ್‌ ಖಾತೆ ಮೂಲಕ ಹಂಚಿರುವ ಪತ್ನಿ ಶ್ವೇತಾ, “5ನೇ ಸೆಪ್ಟೆಂಬರ್ 2018 ರಂದು, ಈ ಆಡಳಿತವು ಸಂಜೀವ್ ಅವರನ್ನು ಮತ್ತು ಎಲ್ಲರನ್ನೂ ಮೌನವಾಗಿಸುವ ಏಕೈಕ ಉದ್ದೇಶದಿಂದ ಅವರನ್ನು ಬಂಧಿಸಿತು.  ಅಂದಿನಿಂದ, ಅವರ ಧೃಡ ಸಂಕಲ್ಪವನ್ನು ಮುರಿಯಲು, ಅವರನ್ನು ಅಪಖ್ಯಾತಿಗೊಳಿಸಲು ಮತ್ತು ಮೌನಗೊಳಿಸಲು ಸಿಕ್ಕಿದ ಯಾವುದೇ ಅವಕಾಶವನ್ನೂ ಬಿಟ್ಟಿಲ್ಲ. ಯಾವುದೇ ಪುರಾವೆಗಳಿಲ್ಲದೆ, ರಾಜಕೀಯ ಪ್ರೇರಿತ ದೋಷಪೂರಿತ ವಿಚಾರಣೆಯಿಂದ ಅಪರಾಧಿ ಎಂದು ಘೋಷಿಸಲ್ಪಟ್ಟು ಇಂದು 4 ವರ್ಷಗಳು ತುಂಬಿವೆ.”

“ಹೊರ ಪ್ರಪಂಚಕ್ಕೆ, ಇದು ಕೇವಲ 4 ವರ್ಷಗಳು .. ಆದರೆ ನಮಗೆ, ಇದು 1462 ದಿನಗಳು ಮತ್ತು 35,088 ಗಂಟೆಗಳ ಈ ಕೆಟ್ಟ ಆಡಳಿತದೊಂದಿಗಿನ ಹಗಲು-ರಾತ್ರಿಯ ಹೋರಾಟ. ಒಂದು ಕುಟುಂಬವಾಗಿ ನಾವು ಛಿದ್ರವಾಗಿ ನಾಲ್ಕು ವರ್ಷಗಳು, ನಾಲ್ಕು ಬೆಳಕಿಲ್ಲದ ದೀಪಾವಳಿಗಳು, ನಾಲ್ಕು ಕತ್ತಲೆಯಾದ ಹೊಸ ವರ್ಷಗಳು, 16 ಜನ್ಮದಿನಗಳು, ನ್ಯಾಯ ಮರೀಚಿಕೆಯಾದ ಇನ್ನೊಂದು ವರ್ಷದ ನೆನಪು. 2 ಪದವಿಗಳು ಅರ್ಥಹೀನವೆಂದು ಅನಿಸಿದವು. ಸಂಜೀವ್ ಇಲ್ಲದೆ ಕಳೆದ ಅನಂತ ಸಂಖ್ಯೆಯ ಕ್ಷಣಗಳು.”

“ಸಂಜೀವ್ ಹೇಳುವಂತೆ, 'ಇದು ಅಂತ್ಯಗೊಳಿಸಬೇಕಾದ ಹೋರಾಟ', ಮತ್ತು ನ್ಯಾಯ ಸಿಗುವವರೆಗೂ ನಾವು ಹೋರಾಡುತ್ತೇವೆ.”

“ಇಂದಿಗೆ 4 ವರ್ಷಗಳು... ಭಗ್ನಗೊಳ್ಳದ, ಬಗ್ಗದ, ಬಾಗದ... ಅವರ ಚೈತನ್ಯ ಮತ್ತು ಸಂಕಲ್ಪದಲ್ಲಿ ಹಿಂದೆಂದಿಗಿಂತಲೂ ಬಲವಾಗಿ (ನಿಂತ ನಾಲ್ಕು ವರ್ಷಗಳು) ಈ ಫ್ಯಾಸಿಸ್ಟ್ ಆಡಳಿತದ ವಿರುದ್ಧ ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ.” ಎಂದು ಶ್ವೇತಾ ಬರೆದಿದ್ದಾರೆ.

ಶ್ವೇತಾ ಭಟ್-ಸಂಜೀವ್‌ ಭಟ್‌ ಕುಟುಂಬದ ಹೋರಾಟಕ್ಕೆ ನೆಟ್ಟಿಗರು ಬೆಂಬಲ ಸೂಚಿಸಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಬೈಕ್ ಮುಟ್ಟಿದ್ದಕ್ಕಾಗಿ ದಲಿತ ಬಾಲಕನನ್ನು ಥಳಿಸಿದ್ದ ಮುಖ್ಯೋಪಾಧ್ಯಾಯನ ಅಮಾನತು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News