×
Ad

ಕ್ರಿಕೆಟಿಗ ಅರ್ಶದೀಪ್ ಸಿಂಗ್ ಪೇಜ್‌ನಲ್ಲಿ ಖಲಿಸ್ತಾನಿ ಪದ: ಕೇಂದ್ರದಿಂದ ವಿಕಿಪೀಡಿಯಾ ಅಧಿಕಾರಿಗಳಿಗೆ ಸಮನ್ಸ್

Update: 2022-09-05 20:27 IST
ಅರ್ಶದೀಪ್ ಸಿಂಗ್ (Photo: Twitter/@arshdeepsinghh)

ಹೊಸದಿಲ್ಲಿ: ಯುವ ಕ್ರಿಕೆಟಿಗ ಅರ್ಶದೀಪ್ ಸಿಂಗ್(Arshdeep Singh) ಅವರ ಪೇಜ್‌ನಲ್ಲಿ ಅವರಿಗೂ ಖಲಿಸ್ತಾನ ಆಂದೋಲನಕ್ಕೂ ನಂಟು ಕಲ್ಪಿಸಿ ಸುಳ್ಳು ಮಾಹಿತಿಯು ಹೇಗೆ ಪ್ರಕಟಗೊಂಡಿದೆ ಎನ್ನುವುದನ್ನು ವಿವರಿಸಲು ವಿಕಿಪೀಡಿಯಾ(Wikipedia) ಅಧಿಕಾರಿಗಳಿಗೆ ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸೋಮವಾರ ಸಮನ್ಸ್ ನೀಡಿದೆ. ಈ ತಪ್ಪು ಮಾಹಿತಿಯು ಕೋಮು ಸೌಹಾರ್ದವನ್ನು ಕದಡಬಹುದು ಮತ್ತು ಕ್ರಿಕೆಟಿಗನ ಕುಟುಂಬಕ್ಕೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗೆ ಕಾರಣವಾಗಬಹುದು ಎನ್ನುವುದು ಕೇಂದ್ರದ ಅಭಿಪ್ರಾಯವಾಗಿದೆ. ಉನ್ನತ ಮಟ್ಟದ ಸಮಿತಿಯು ವಿಕಿಪೀಡಿಯಾದ ಅಧಿಕಾರಿಗಳನ್ನು ಪ್ರಶ್ನಿಸುವ ಸಾಧ್ಯತೆಯಿದೆ ಮತ್ತು ಶೋಕಾಸ್ ನೋಟಿಸ್‌ನ್ನು ಹೊರಡಿಸಬಹುದು.

ರವಿವಾರ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿದ್ದ ಸೂಪರ್ 4 ಏಶ್ಯಾ ಕಪ್‌ನ ರೋಮಾಂಚಕ ಪಂದ್ಯದಲ್ಲಿ ನಿರ್ಣಾಯಕ ಕ್ಯಾಚೊಂದನ್ನು ಕೈಬಿಟ್ಟ ಬಳಿಕ ಸಿಂಗ್ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಬಳಕೆದಾರರಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದ್ದಾರೆ.

ಸಿಂಗ್ ಅವರ ವಿಕಿಪೀಡಿಯಾ ಪೇಜ್‌ನ ಎಡಿಟ್ ಹಿಸ್ಟರಿಯಂತೆ ನೋಂದಣಿಯಾಗಿರದ ಬಳಕೆದಾರನೋರ್ವ ಪ್ರೊಫೈಲ್‌ನ ಹಲವಾರು ಕಡೆಗಳಲ್ಲಿ ‘ಭಾರತ’ದ ಬದಲು ‘ಖಲಿಸ್ತಾನ್’ಎಂದು ಸೇರಿಸಿದ್ದು,ವಿಕಿಪೀಡಿಯಾ ಸಂಪಾದಕರು 15 ನಿಮಿಷಗಳಲ್ಲಿ ಅದನ್ನು ರದ್ದುಗೊಳಿಸಿದ್ದರು.
ಪಂದ್ಯದ 18ನೇ ಓವರ್‌ನಲ್ಲಿ ಆಸಿಫ್ ಅಲಿ ನೀಡಿದ್ದ ತುಲನಾತ್ಮಕವಾಗಿ ಸುಲಭದ ಕ್ಯಾಚ್‌ನ್ನು ಭಾರತೀಯ ವೇಗಿ ಸಿಂಗ್ ಕೈಬಿಟ್ಟಿದ್ದು ಪಂದ್ಯವು ಭಾರೀ ತಿರುವನ್ನು ಪಡೆದುಕೊಳ್ಳಲು ಕಾರಣವಾಗಿತ್ತು ಮತ್ತು ಪಾಕಿಸ್ತಾನವು ಐದು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.

ಇದನ್ನೂ ಓದಿ: ಪಾಕ್ ಎದುರು ಭಾರತದ ಸೋಲನ್ನು ವಿಶ್ಲೇಷಿಸಿ ಟೀಕೆಗೊಳಗಾದ ಸುಧೀರ್ ಚೌಧರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News