×
Ad

ನನ್ನನ್ನು ಬಂಧಿಸಲು ಒತ್ತಡ ಹೇರಿದ್ದರಿಂದ ಸಿಬಿಐ ಅಧಿಕಾರಿ ಆತ್ಮಹತ್ಯೆ: ಮನೀಶ್‌ ಸಿಸೋಡಿಯಾ ಗಂಭೀರ ಆರೋಪ

Update: 2022-09-05 20:44 IST
ಮನೀಶ್‌ ಸಿಸೋಡಿಯಾ (PTI) 

ಹೊಸದಿಲ್ಲಿ: ತನ್ನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಒತ್ತಡ ಹೇರಿದ್ದರಿಂದ ಸಿಬಿಐ(CBI) ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿದ್ದಾರೆ ಎಂದು ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(Manish Sisodia) ಅವರ ಗಂಭೀರ ಆರೋಪ ಮಾಡಿದ್ದು, ಈ ಆರೋಪಕ್ಕೆ ಸಿಬಿಐ ಪ್ರತಿಕ್ರಿಯಿಸಿದೆ. 

ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಸಿಬಿಐ ಅಧಿಕಾರಿಯ ಮೇಲೆ ನನ್ನ ವಿರುದ್ಧ ತಪ್ಪು ಪ್ರಕರಣ ದಾಖಲಿಸಿ ಬಂಧಿಸುವಂತೆ ಒತ್ತಡ ಹೇರಲಾಗಿದೆ, ಒತ್ತಡ ತಾಳಲಾರದೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ. ಮನೀಶ್ ಸಿಸೋಡಿಯಾ ಈ ಮಾತು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಇದೀಗ ಸಿಸೋಡಿಯಾ ಆರೋಪಕ್ಕೆ ಸ್ವತಃ ಸಿಬಿಐಯೇ ಪ್ರತಿಕ್ರಿಯೆ ನೀಡಿದೆ. ಮನೀಶ್ ಸಿಸೋಡಿಯಾ ಅವರ ಚೇಷ್ಟೆಯ ಮತ್ತು ತಪ್ಪುದಾರಿಗೆಳೆಯುವ ಹೇಳಿಕೆಯನ್ನು ಸಿಬಿಐ ಬಲವಾಗಿ ನಿರಾಕರಿಸುತ್ತದೆ ಎಂದು ತನಿಖಾ ಸಂಸ್ಥೆ ಹೇಳಿದೆ. ಆತ್ಮಹತ್ಯೆ ಮಾಡಿಕೊಂಡ ಸಿಬಿಐ ಅಧಿಕಾರಿ ದಿವಂಗತ ಜಿತೇಂದ್ರ ಕುಮಾರ್ ಅವರು ಅಬಕಾರಿ ನೀತಿಯ ತನಿಖೆಯಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ ಎಂದು ಸಿಬಿಐ ಹೇಳಿದೆ.

ದಿಲ್ಲಿ ಅಬಕಾರಿ ನೀತಿ ಪ್ರಕರಣದ ಪ್ರಸ್ತುತ ತನಿಖೆಯಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಸಿಸೋಡಿಯಾ ಪ್ರಯತ್ನಿಸುತ್ತಿದ್ದಾರೆ ಎಂದು ಸಿಬಿಐ ಪ್ರತಿ ಆರೋಪ ಮಾಡಿದೆ. 

ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ದಿಲ್ಲಿ ಪೊಲೀಸರ ಹೇಳಿಕೆಯನ್ನು ಸಿಬಿಐ ಉಲ್ಲೇಖಿಸಿದೆ. ಮೃತ ಅಧಿಕಾರಿಯು ತನ್ನ 'ಡೆತ್ ನೋಟ್'ನಲ್ಲಿ ತನ್ನ ಸಾವಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಅಬಕಾರಿ ನೀತಿ ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವೊಬ್ಬ ಆರೋಪಿಗೂ ಕ್ಲೀನ್ ಚಿಟ್ ನೀಡಿಲ್ಲ. ಸಿಸೋಡಿಯಾ ಅವರ ಚೇಷ್ಟೆಯ ಮತ್ತು ದಾರಿತಪ್ಪಿಸುವ ಹೇಳಿಕೆಯು ದಿಲ್ಲಿ ಅಬಕಾರಿ ನೀತಿ ಪ್ರಕರಣದ ಪ್ರಸ್ತುತ ತನಿಖೆಯಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿದೆ ಮತ್ತು ಅಧಿಕಾರಿಯ ಸಾವಿನ ತನಿಖೆಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪಕ್ಕೆ ಸಮಾನವಾಗಿದೆ ಎಂದು ಸಿಬಿಐ ಹೇಳಿದೆ. 

ಮನೀಶ್ ಸಿಸೋಡಿಯಾ ಹೇಳಿದ್ದೇನು?

ಸಿಬಿಐ ಅಧಿಕಾರಿ ಸಾವಿನ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮನೀಶ್ ಸಿಸೋಡಿಯಾ, “ಎರಡು ದಿನಗಳ ಹಿಂದೆ ಸಿಬಿಐ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಂಪೂರ್ಣ ಸುದ್ದಿಯನ್ನು ಮಾಧ್ಯಮಗಳೂ ತೋರಿಸಿದ್ದವು. ಆತ್ಮಹತ್ಯೆ ಮಾಡಿಕೊಂಡ ಸಿಬಿಐ ಅಧಿಕಾರಿ ಜಿತೇಂದ್ರ ಕುಮಾರ್ ಜಿ ಎಂದು ತಿಳಿದು ಬಂದಿದೆ. ಉಪ ಕಾನೂನು ಸಲಹೆಗಾರರಾಗಿದ್ದ ಅವರು ಸಿಬಿಐನ ಭ್ರಷ್ಟಾಚಾರ ನಿಗ್ರಹ ಶಾಖೆಯಲ್ಲಿ ಕಾನೂನು ಸಲಹೆಗಾರರಾಗಿದ್ದರು. ಕಾನೂನು ವಿಷಯಗಳನ್ನು ಅನುಮೋದಿಸುವುದು, ತಿರಸ್ಕರಿಸುವುದು, ಎಲ್ಲಾ ಕಾನೂನುಬದ್ಧತೆಯನ್ನು ನೋಡುವುದು ಅವರ ಕೆಲಸವಾಗಿತ್ತು. ಮತ್ತು ನನ್ನ ವಿರುದ್ಧ ದಾಖಲಾಗಿರುವ ನಕಲಿ ಎಫ್‌ಐಆರ್ ಪ್ರಕರಣದಲ್ಲಿ, ಅಬಕಾರಿ ಪ್ರಕರಣದಲ್ಲಿ, ಕಾನೂನು ವಿಷಯವನ್ನೂ ಅವರೇ ನೋಡಿಕೊಳ್ಳುತ್ತಿದ್ದರು. ನನ್ನ ವಿರುದ್ಧ ತಪ್ಪು ಪ್ರಕರಣ ದಾಖಲಿಸಿ ಬಂಧಿಸಲು ಕಾನೂನು ಅನುಮತಿ ನೀಡುವಂತೆ ಒತ್ತಡ ಹೇರಲಾಗಿತ್ತು. ಆದರೆ, ಅವರು ಅನುಮೋದನೆ ನೀಡಲಿಲ್ಲ. ಅವರ ಮೇಲೆ ವಿಪರೀತ ಒತ್ತಡವಿದ್ದು, ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅತ್ಯಂತ ದುಃಖಕರ ಘಟನೆ' ಎಂದು ಸಿಸೋಡಿಯಾ ಗಂಭೀರ ಆರೋಪ ಮಾಡಿದ್ದರು.

ಮೃತ ಸಿಬಿಐ ಅಧಿಕಾರಿಯ ಕುಟುಂಬಕ್ಕೆ ಸಾಂತ್ವನ ಹೇಳಿದ ಸಿಸೋಡಿಯಾ,  ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು. “ನೀವು ನನ್ನನ್ನು ನಕಲಿ ರೀತಿಯಲ್ಲಿ ಸಿಲುಕಿಸಲು ಬಯಸುತ್ತೀರಿ, ನನ್ನನ್ನು ಸಿಲುಕಿಸಿ ಎಂದು ನಾನು ಇಂದು ಪ್ರಧಾನಿಗೆ ಹೇಳಲು ಬಯಸುತ್ತೇನೆ. ಆದರೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಬೇಡಿ, ಇದರಿಂದ ಮನೆ ಹಾಳು ಮಾಡುತ್ತಿದ್ದಾರೆ. ಇದು ಸರಿಯಲ್ಲ,’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News