ರಶ್ಯ ವಿರುದ್ಧ ಪ್ರತಿದಾಳಿಯಲ್ಲಿ ಉಕ್ರೇನ್‌ಗೆ ಮುನ್ನಡೆ: ಝೆಲೆನ್‌ಸ್ಕಿ

Update: 2022-09-05 17:38 GMT

ಕೀವ್, ಸೆ.೫: ಇದೀಗ ರಶ್ಯ ಸೇನೆಯ ವಿರುದ್ಧ ಪ್ರತಿದಾಳಿ ಆರಂಭಿಸಿರುವ ಉಕ್ರೇನ್ ಸೇನೆ ದಕ್ಷಿಣದಲ್ಲಿ ೨ ಮತ್ತು ಪೂರ್ವದಲ್ಲಿ ಒಂದು ವಸಾಹತನ್ನು ಮರುಸ್ವಾಧೀನ ಪಡಿಸಿಕೊಳ್ಳಲು ಯಶಸ್ವಿಯಾಗಿದೆ. ಈ ಮುನ್ನಡೆಯು ನಮ್ಮ ಎಲ್ಲಾ ಜನರು, ಎಲ್ಲಾ ಭೂಪ್ರದೇಶವನ್ನು ಮುಕ್ತಗೊಳಿಸಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ರವಿವಾರ ಹೇಳಿದ್ದಾರೆ. 

ದಕ್ಷಿಣದಲ್ಲಿ ರಶ್ಯನ್ನರ ವಿರುದ್ಧ ಕಳೆದ ವಾರ ಪ್ರತಿದಾಳಿ ಆರಂಭಿಸಿದ ಬಳಿಕ ನಮ್ಮ ಸಶಸ್ತç ಪಡೆಗಳು, ಗುಪ್ತಚರ ದಳ, ವಿಶೇಷ ಕಾರ್ಯಾಚರಣೆ ತಂಡ ಗಮನಾರ್ಹ ಮುನ್ನಡೆ ಸಾಧಿಸಿದೆ. ಆಕ್ರಮಣಕಾರರು ಈಗಾಗಲೇ ಕ್ರಿಮಿಯಾದಿಂದ ಪಲಾಯನ ಮಾಡಲು ಪ್ರಾರಂಭಿಸಿರುವುದು ಎಲ್ಲರಿಗೂ ತಿಳಿದಿದೆ ಮತ್ತು ಅವರಿಗೆ ಈಗ ಬೇರೆ ಆಯ್ಕೆಯೇ ಇಲ್ಲ ಎಂದಾಗಿದೆ.  ಪೂರ್ವ ಪ್ರಾಂತದಲ್ಲೂ ನಮಗೆ ಮುನ್ನಡೆ ಲಭಿಸಿದೆ. ಇದನ್ನು ಸಾಧ್ಯವಾಗಿಸಿದ ನಮ್ಮ ಧೀರ ಯೋಧರನ್ನು ಅಭಿನಂದಿಸುತ್ತೇನೆ ಎಂದು ದೇಶವನ್ನುದ್ದೇಶಿಸಿ ಮಾತನಾಡಿದ ಝೆಲೆನ್‌ಸ್ಕಿ ಹೇಳಿದ್ದಾರೆ.

ಈ ಮಧ್ಯೆ, ಉಕ್ರೇನ್‌ನ ಖೆರ್ಸಾನ್ ಪ್ರದೇಶದ ವಿಸೊಕೊಪಿಲ್ಯ ನಗರದ ಮೇಲೆ ಉಕ್ರೇನ್ ಯೋಧರು ದೇಶದ ಧ್ವಜವನ್ನು ಹಾರಿಸುತ್ತಿರುವ ವೀಡಿಯೊವನ್ನು ಉಕ್ರೇನ್ ಅಧ್ಯಕ್ಷರ ಕಚೇರಿಯ ಸಹಾಯಕ ಮುಖ್ಯಸ್ಥ ಕಿರಿಲೊ ಟಿಮೊಶೆಂಕೊ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News