ಕೇರಳದಿಂದ ಲಂಡನ್‌ಗೆ ಸೈಕಲ್‌ ಯಾತ್ರೆ; ಮುಲ್ಕಿ ತಲುಪಿದ ಫಯಾಝ್ ಅಹ್ಮದ್‌ಗೆ ಸ್ವಾಗತ

Update: 2022-09-05 18:24 GMT

ಮುಲ್ಕಿ, ಸೆ.5: ಕೇರಳದಿಂದ ಲಂಡನ್‌ಗೆ ಸೈಕಲ್ ಯಾತೆ ಹೊರಟಿರುವ ಕ್ಯಾಲಿಕಟ್ ಸನ್ ರೈಸ್ ರೋಟರಿ ಸದಸ್ಯ ಫಯಾಝ್ ಅಹ್ಮದ್ ಶನಿವಾರ ಮುಲ್ಕಿಗೆ ತಲುಪಿದ್ದಾರೆ.

ತಿರುವನಂತಪುರದಿಂದ 450 ದಿನಗಳಲ್ಲಿ ಮೂವತ್ತು ಸಾವಿರ ಕಿ.ಮೀ. ಕ್ರಮಿಸಿ ಬ್ರಿಟನ್ ದೇಶದ ರಾಜಧಾನಿ ಲಂಡನ್‌ವರೆಗೆ ಸೈಕಲ್ ಮೂಲಕ ಪ್ರಯಾಣ ಹೊರಟಿರುವ ಫಯಾಝ್ ಅಹ್ಮದ್‌ರನ್ನು ಮುಲ್ಕಿಯಲ್ಲಿ ಸ್ವಾಗತಿಸಲಾಯಿತು.

ಈ ವೇಳೆ ಮಾತನಾಡಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಉತ್ತಮ ಸಂದೇಶ ಸಾರುವ ಸಾಹಸ ಯಾತ್ರೆಗಳು ಅಭಿನಂದನೀಯವಾಗಿದ್ದು, ಸಾರ್ವಜನಿಕರ ಹೆಚ್ಚು ಪ್ರೋತ್ಸಾಹ ಅಗತ್ಯವಿದೆ ಎಂದರು.  

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಫಯಾಝ್ ಅಹ್ಮದ್, ಆಗಸ್ಟ್ 15ರಂದು ಕೇರಳದ ತಿರುವನಂತಪುರದಿಂದ ಈ ಸೈಕಲ್ ಯಾತ್ರೆ ಆರಂಭಿಸಿದ್ದೇನೆ. ಒಟ್ಟು 450 ದಿನಗಳಲ್ಲಿ 30 ಸಾವಿರ ಕಿ.ಮೀ. ಕ್ರಮಿಸಿ ಲಂಡನ್ ತಲುಪುವ ಉದ್ದೇಶ ಹೊಂದಿದ್ದೇನೆ. ದಾರಿ ಮಧ್ಯೆ 2 ಖಂಡಗಳು ಹಾಗೂ 35 ದೇಶಗಳನ್ನು ದಾಟಲಿದ್ದೇನೆ ಎಂದರು.

ಪಾಕಿಸ್ಥಾನ ಪ್ರವೇಶ ಇಲ್ಲ: ಪಾಕಿಸ್ತಾನ ಮುಖಾಂತರ ಹೋಗುವುದನ್ನು ತಪ್ಪಿಸುವ ಸಲುವಾಗಿ ಮುಲ್ಕಿಯಿಂದ ಕುಂದಾಪುರ, ಪಣಜಿ, ಮುಂಬೈ ತಲುಪಿ ಅಲ್ಲಿಂದ ವಿಮಾನದ ಮೂಲಕ ಯುಎಇ ತಲುಪಿ ಅಲ್ಲಿಂದ ಸೈಕಲ್‌ನಲ್ಲಿ ಪ್ರಯಾಣ ಬೆಳೆಸಲಿದ್ದೇನೆ. ದಾರಿಯ ಪ್ರತಿಯೊಂದು ಕಡೆಗಳಲ್ಲಿ ರೋಟರಿ ಸದಸ್ಯರು ನನಗೆ ಸಹಕಾರ ನೀಡಲಿದ್ದಾರೆ. ಈ ಹಿಂದೆ 2019ರಲ್ಲಿ 7 ದೇಶಗಳು 8 ಸಾವಿರ ಕಿ.ಮೀ. ಸೈಕಲ್ ಯಾತ್ರೆಯಲ್ಲಿ ಸಿಂಗಾಪುರ ತಲುಪಿರುವ ಅನುಭವವಿದೆ ಎಂದರು.

ಮುಲ್ಕಿ ರೋಟರಿ  ಅಧ್ಯಕ್ಷ ಜೊವಿನ್ ಪ್ರಕಾಶ್ ಡಿಸೋಜ, ಸದಸ್ಯರಾದ ಭುಜಂಗ ಕವತ್ತಾರು, ರವಿಚಂದ್ರ, ಶಿವರಾಮ್, ಜೋಯಲ್ ಹೆರಾಲ್ಡ್ ಡಿಸೋಜ, ಪ್ರೀತಮ್ ಉಪಾಧ್ಯಾಯ, ಸಚ್ಚಿದಾನಂದ ಉಡುಪ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News