ಬ್ರಿಟನ್ ಪ್ರಧಾನಿ ಹುದ್ದೆ ರೇಸ್‍ನಲ್ಲಿ ಸೋತ ಬಳಿಕ ರಿಷಿ ಸುನಾಕ್ ಹೇಳಿದ್ದೇನು ?

Update: 2022-09-06 03:55 GMT

ಲಂಡನ್: ಬ್ರಿಟನ್‍ನ ಕಠಿಣ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸುವ ನಿಟ್ಟಿನಲ್ಲಿ ನೂತನವಾಗಿ ಪ್ರಧಾನಿಯಾಗಲಿರುವ ಲಿಝ್‌ ಟ್ರಸ್ (Liz Truss) ಅವರನ್ನು ಕನ್ಸರ್ವೇಟಿವ್ ಪಕ್ಷದ (Conservative Party) ಎಲ್ಲ ಸದಸ್ಯರು ಒಗ್ಗಟ್ಟಾಗಿ ಬೆಂಬಲಿಸಬೇಕು ಎಂದು ಪ್ರಧಾನಿ ಹುದ್ದೆ ರೇಸ್‍ನಲ್ಲಿ ಸೋತ ಭಾರತೀಯ ಮೂಲದ ರಿಷಿ ಸುನಾಕ್ (Rishi Sunak) ಕರೆ ನೀಡಿದ್ದಾರೆ.

ಪ್ರಧಾನಿ ಹುದ್ದೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಚುನಾವಣೆಯಲ್ಲಿ ತಮ್ಮ ಪರವಾಗಿ ಮತ ಚಲಾಯಿಸಿದ ಎಲ್ಲರಿಗೂ ಅವರು ಟ್ವಿಟ್ಟರ್ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

"ಕನ್ಸರ್ವೇಟಿವ್ ಪಕ್ಷದ ಎಲ್ಲ ಸದಸ್ಯರೂ ಒಂದು ಕುಟುಂಬದವರಿದ್ದಂತೆ ಎಂದು ನಾನು ಹೇಳುತ್ತಲೇ ಬಂದಿದ್ದೇನೆ. ದೇಶವನ್ನು ಕಠಿಣ ಪರಿಸ್ಥಿತಿಯಲ್ಲಿ ಮುನ್ನಡೆಸಬೇಕಾಗಿರುವ ಹೊಸ ಪ್ರಧಾನಿ ಲಿಝ್‌ ಟ್ರಸ್ ಅವರ ಬೆಂಬಲಕ್ಕೆ ನಿಲ್ಲಲು ನಾವೆಲ್ಲರೂ ಒಗ್ಗಟ್ಟಾಗಬೇಕು" ಎಂದು ಕೋರಿದ್ದಾರೆ.

ಒಟ್ಟು 1,72,437 ಅರ್ಹ ಟೋರಿ ಮತದಾರರ ಪೈಕಿ ಶೇಕಡ 82.6ರಷ್ಟು ಮಂದಿ ಮತ ಚಲಾಯಿಸಿದ್ದು, 654 ಮತಗಳು ತಿರಸ್ಕೃತಗೊಂಡಿದ್ದವು. ಲಿಝ್‌ ಟ್ರಸ್ 81,326 ಮತ ಪಡೆದರೆ, ಸುನಾಕ್ 60,399 ಮತ ಗಳಿಸಿದ್ದರು. ಮಾರ್ಗರೇಟ್ ಥ್ಯಾಚರ್ ಮತ್ತು ಥೆರೇಸಾ ಮೇ ಅವರ ಬಳಿಕ ಬ್ರಿಟನ್‍ನ ಮೂರನೇ ಮಹಿಳಾ ಪ್ರಧಾನಿಯಾಗಿ ಲಿಝ್‌ ಟ್ರಸ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸುನಾಕ್ ಅವರು ರವಿವಾರ ಕೂಡಾ, ಕನ್ಸರ್ವೇಟಿವ್ ಪಕ್ಷದ ನಾಯಕತ್ವ ರೇಸ್‍ನಲ್ಲಿ ತಾವು ಪರಾಭವಗೊಂಡರೆ, ಮುಂದಿನ ಸರ್ಕಾರವನ್ನು ಬೆಂಬಲಿಸುವುದು ನನ್ನ ಮುಂದಿನ ಜವಾಬ್ದಾರಿ ಎಂದು ಹೇಳಿರುವುದಾಗಿ ndtv.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News