×
Ad

ಕೊರಗರ ‘ಆರೋಗ್ಯ ನಿಧಿ’ ರದ್ಧತಿ ಬಿಜೆಪಿಯ ಹಿಡನ್ ಅಜೆಂಡಾ: ಹರೀಶ್ ಕಿಣಿ

Update: 2022-09-06 17:42 IST

ಉಡುಪಿ, ಸೆ.6: ಯುಪಿಎ ಸರಕಾರ ಕೊರಗ ಸಮುದಾಯಕ್ಕೆ ಜಾರಿಗೆ ತಂದಿದ್ದ ಆರೋಗ್ಯ ನಿಧಿ ಯೋಜನೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸಮಾಜ ಕಲ್ಯಾಣ ಇಲಾಖೆಯ ಮೂಲಕ ರದ್ದುಗೊಳಿಸಿ ಆದೇಶಿಸಿರುವುದು ಕೊರಗ ಸಮುದಾಯಕ್ಕೆ ಎಸಗಿರುವ ದ್ರೋಹ. ಬಿಜೆಪಿ ತನ್ನ ಹಿಡನ್ ಅಜೆಂಡಾವನ್ನು ಈ ಮೂಲಕ ಅನುಷ್ಠಾನ ಗೊಳಿಸಲು ಹೊರಟಂತಿದೆ ಎಂದು ಕೆಪಿಸಿಸಿ ಸಂಯೋಜಕ ಹರೀಶ್ ಕಿಣಿ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಕೂಡಲೇ ಈ ಆದೇಶವನ್ನು ರದ್ದುಗೊಳಿಸಿ ಕೊರಗ ಸಮುದಾಯಕ್ಕೆ ನೆರವಾಗಬೇಕು. ಮುಂದಿನ ದಿನಗಳಲ್ಲಿ ಕೊರಗ ಸಮುದಾಯದವ ರೊಂದಿಗೆ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ, ಸಾಮಾಜಿಕ ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಕೈಜೋಡಿಸಲಿರುವರು ಎಂದು ತಿಳಿಸಿದರು.

ಇದೀಗ ಕೊರಗ ಸಮುದಾಯದ ವಿರುದ್ಧ ಸರಕಾರ ಮತ್ತೊಂದು ಆದೇಶ ಹೊರಡಿಸಿದೆ. ಎಸ್‌ಸಿಎಸ್‌ಟಿ ಸಮುದಾಯದ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ 75 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಭರವಸೆ ನೀಡಿ, ಅವರು ತಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಇನ್ನಿತರ ದಾಖಲೆಗಳನ್ನು ಸಲ್ಲಿಸಿದ ಬಳಿಕ ಆ ಯೋಜನೆ ಹಿಂಪಡೆಯಲಾಗಿದೆ ಎಂದು ಹೊಸ ಆದೇಶ ಹೊರಡಿಸಲಾಗಿದೆ. ಇದು ಕೊರಗ ಹಾಗೂ ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಮಾಡಿರುವ ಅನ್ಯಾಯ. ಈ ಎಲ್ಲ ಜನ ವಿರೋಧ ಆದೇಶಗಳನ್ನು ಕೈಬಿಟ್ಟು, ಈ ಸಮುದಾಯಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಅಲೆವೂರು ಗ್ರಾಪಂ ಅಧ್ಯಕ್ಷೆ ಪುಷ್ಪಾ ಅಂಚನ್, ಮಾಜಿ ತಾಪಂ ಸದಸ್ಯ ಲಕ್ಷ್ಮೀನಾರಾಯಣ ಪ್ರಭು, ಕಾಂಗ್ರೆಸ್ ಮುಖಂಡ ಸತೀಶ್ ಕುಮಾರ್ ಉಪಸ್ಥಿತರಿದ್ದರು.

"ಈಗಾಗಲೇ ಅಲ್ಪಸಂಖ್ಯಾತರ ಮೇಲೆ ಹಲವು ಸಂವಿಧಾನಿಕ ಕ್ರಮ ಕೈಗೊಂಡಿ ರುವ ಬಿಜೆಪಿ ಸರಕಾರ ಇದೀಗ ಮುಗ್ಧ, ಆರ್ಥಿಕವಾಗಿ ಹಿಂದುಳಿದಿರುವ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕೇವಲ ೧೫-೧೬ಸಾವಿರ ಜನಸಂಖ್ಯೆ ಇರುವ ಪರಿಶಿಷ್ಟ ಪಂಗಡದ ಕೊರಗ ಜನಾಂಗದ ಜನರಿಗೆ ಗೌರವಯುತವಾಗಿ ಬದುಕಲು ತೊಂದರೆಯೊಡ್ಡುತ್ತಿದೆ. ಅವರ ಆಹಾರ ಕ್ರಮದ ಬಗ್ಗೆ ಈಗಾಗಲೇ ಪರಿವಾರ ಸಂಘಟನೆಗಳ ಮೂಲಕ ತಡೆಯೊಡ್ಡುತ್ತಿದ್ದು, ಈಗ ವೈದ್ಯಕೀಯ ನೆರವಿನ ಯೋಜನೆಯನ್ನು ಕೂಡ ಕಸಿದುಕೊಂಡಿದೆ".
-ಹರೀಶ್ ಕಿಣಿ, ಕೆಪಿಸಿಸಿ ಸಂಯೋಜಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News