ಉಡುಪಿ; ಆತ್ರಾಡಿ ಗ್ರಾಪಂ ಉಪಾಧ್ಯಕ್ಷ ಸೇರಿ ಮೂವರಿಂದ ಮಹಿಳೆಗೆ ಹಲ್ಲೆ: ದೂರು-ಪ್ರತಿದೂರು

Update: 2022-09-06 14:00 GMT

ಉಡುಪಿ, ಸೆ.6: ರಸ್ತೆ ವಿಚಾರದಲ್ಲಿ ಬಿಜೆಪಿ ಬೆಂಬಲಿತ ಆತ್ರಾಡಿ ಗ್ರಾಪಂ ಉಪಾಧ್ಯಕ್ಷ ಸೇರಿದಂತೆ ಮೂವರು ಮಹಿಳೆಗೆ ಹಲ್ಲೆ ನಡೆಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

ಸೆ.5ರಂದು ಸಂಜೆ ವೇಳೆ ಆತ್ರಾಡಿ ಪರೀಕಾ ನಿವಾಸಿ ಆರತಿ ಸುರೇಶ್ ಶೆಟ್ಟಿ (45) ಎಂಬವರ ಮನೆಯ ಮುಂಭಾಗದಲ್ಲಿ ಆತ್ರಾಡಿ ಗ್ರಾಪಂ ವತಿಯಿಂದ ಕಾಂಕ್ರಿಟ್ ರಸ್ತೆ ಮಾಡುವ ಸಲುವಾಗಿ ಆರೋಪಿಗಳಾದ ರತ್ನಾಕರ ಶೆಟ್ಟಿ, ಚಂದ್ರಹಾಸ ಶೆಟ್ಟಿ ಮತ್ತು ಸಂತೋಷ್ ಪೂಜಾರಿ ಮನೆಯ ಅಂಗಳಕ್ಕೆ ಅಕ್ರಮ  ಪ್ರವೇಶಿಸಿದ್ದು, ಈ ವೇಳೆ ಆರತಿ, ಸ್ಥಳಕ್ಕೆ ಹೋಗಿ ಜಾಗದ ದಾಖಲಾತಿಯನ್ನು ಸರಿ ಮಾಡಿ ರಸ್ತೆ ನಿರ್ಮಾಣ ಕೆಲಸ ಮುಂದುವರೆಸುವಂತೆ ತಿಳಿಸಿದ್ದರೆನ್ನಲಾಗಿದೆ.

ಈ ವೇಳೆ ಆರೋಪಿಗಳು ಆರತಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಇದನ್ನು ಪ್ರತಿಭಟಿಸಲು ಹೋದ ಅವರಿಗೆ ಆರೋಪಿಗಳು ತಡೆದು ನಿಲ್ಲಿಸಿ ಎಳೆದಾಡಿ ಹೊಡೆದಿದ್ದಾರೆಂದು ದೂರಲಾಗಿದೆ. ಇದರ ಪರಿಣಾಮ ಆರತಿ ಅವರ ಹಣೆಗೆ ಗಾಯವಾಗಿದ್ದು, ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿದೂರು: ಪರೀಕಾ ನಿವಾಸಿ ಚಂದ್ರಹಾಸ ಶೆಟ್ಟಿ ನೀಡಿದ ದೂರಿನಂತೆ, ಗ್ರಾಪಂನಿಂದ ಅನುದಾನ ಮಂಜೂರಾದ ರಸ್ತೆಯ ಕಾಮಗಾರಿ ನಡೆಯುತ್ತಿರುವಾಗ ಆರತಿ, ಆಕೆಯ ಗಂಡ ಸುರೇಶ್ ಶೆಟ್ಟಿ ಹಾಗೂ ತಮ್ಮ ಅಶೋಕ್ ಎಂಬವರು ಸ್ಥಳಕ್ಕೆ ಬಂದು, ನನ್ನ ಹಾಗೂ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕರ ಜೊತೆ ಜಗಳ ಮಾಡಿದ್ದರು. ಬಳಿಕ ಕೋಪದಿಂದ ನನಗೆ ಮತ್ತು ಗ್ರಾಪಂ ಉಪಾಧ್ಯಕ್ಷ ರತ್ನಾಕರ ಶೆಟ್ಟಿಗೆ ಹಲ್ಲೆ ಮಾಡಿದ್ದಾರೆ ಎಂದು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News