×
Ad

ದ್ರವ ತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿ-ಪ್ರಾತ್ಯಕ್ಷಿಕೆ

Update: 2022-09-06 19:46 IST

ಬ್ರಹ್ಮಾವರ, ಸೆ.6: ದ್ರವ ತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿ-ಪ್ರಾತ್ಯಕ್ಷಿಕೆ ಕಾರ್ಯಕ್ರಮ ಕೊಕ್ಕರ್ಣೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಜರಗಿತು.

ಕೊಕ್ಕರ್ಣೆ ಸಮೂಹ ಸಂಪನ್ಮೂಲ ಶಿಕ್ಷಕಿ ದೀಪಾ ಶೆಟ್ಟಿ ಮಾತನಾಡಿ, ಘನ ಹಾಗೂ ದ್ರವ ತ್ಯಾಜ್ಯದ ಸಮರ್ಪಕ ನಿರ್ವಹಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಘನ ತ್ಯಾಜ್ಯ ನಿರ್ವಹಣೆಗೆ  ವಿಶೇಷ  ಕಾರ್ಯಕ್ರಮಗಳ ಮೂಲಕ ರಾಜ್ಯದ ಗಮನ ಸೆಳೆದಿರುವ ಉಡುಪಿ ಜಿಲ್ಲೆ ಇದೀಗ ದ್ರವ ತ್ಯಾಜ್ಯದ ಸರಿಯಾದ ನಿರ್ವಹಣೆ ಕುರಿತು ಶಾಲಾ ಮಕ್ಕಳಿಗೆ ಮಾಹಿತಿಯನ್ನು ನೀಡುತ್ತಿರುವುದು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಕಾಡೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ಮಾಹಿತಿ ನೀಡಿ, ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡ ಬೇಕು. ದ್ರವತ್ಯಾಜ್ಯವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ನಮ್ಮ ಹಿರಿಯರು ಕಾಬಾಳೆ, ಕೈತೋಟ, ಕೆಸು ನೆಡುವಿಕೆಯಂತಹ ನಿಸರ್ಗ ಸ್ನೇಹಿ ಮಾದರಿಗಳನ್ನು ನೀಡಿದ್ದು ಇಂಗು ಗುಂಡಿಗಳ ನಿರ್ಮಾಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕಾದ ಅಗತ್ಯವಿದೆ ಎಂದರು.

ಉಡುಪಿ ಜಿಪಂ ಸ್ವಚ್ಛ ಭಾರತ್ ಗ್ರಾಮೀಣ ವಿಭಾಗದ ವತಿಯಿಂದ ಜಿಲ್ಲಾದ್ಯಂತ ಶಾಲಾ ಕಾಲೇಜುಗಳಲ್ಲಿ ತ್ಯಾಜ್ಯ ನೀರು ನಿರ್ವಹಣೆ ಕುರಿತು ಮಾಹಿತಿ ಕಾರ್ಯಕ್ರಮ ಜರುಗುತ್ತಿದ್ದು ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕಪ್ಪುನೀರು, ಬೂದು ನೀರು ಕುರಿತು ವಿದ್ಯಾರ್ಥಿಗಳ ಹಂತದಲ್ಲಿ ಮಾಹಿತಿ ದೊರೆತರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಅವರು ಹೇಳಿದರು.

ಕೊಕ್ಕರ್ಣೆ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಕುಸುಮ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಶಿಕ್ಷಕರಾದ ಭಾಸ್ಕರ ಪೂಜಾರಿ, ಗುಲಾಬಿ, ಆಶಾ ಕಿರಣ, ಪ್ರಭಾ, ಅತಿಥಿ ಶಿಕ್ಷಕರಾದ ಯಶೋಧಾ, ರೇಷ್ಮಾ, ಮಾಲತಿ, ಉಷಾ, ಕಾಡೂರು ಗ್ರಾಪಂ ಸಿಬ್ಬಂದಿ ಶಿವರಾಮ್ ಹಾಗೂ  ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News