×
Ad

ಬಾದಾಮಿಯ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗೆ ಜೀವಿತಾವಧಿ ಜೈಲುಶಿಕ್ಷೆ

Update: 2022-09-06 20:14 IST
ಹನುಮಂತ ಬಸಪ್ಪ ಕಂಬಳಿ

ಉಡುಪಿ, ಸೆ.6: ಮೂರು ವರ್ಷಗಳ ಹಿಂದೆ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ ಮೂಡುಸಗ್ರಿ ರೈಲ್ವೆ ಹಳಿಯ ಸಮೀಪದ ಹಾಡಿಯಲ್ಲಿ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣದ ಆರೋಪಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹನುಮಂತ ಬಸಪ್ಪ ಕಂಬಳಿ (42)ಗೆ ಜೀವಿತಾವಾಧಿ ಕಾರಾಗೃಹ ಶಿಕ್ಷೆ ಸಹಿತ ಇತರೆ ಪ್ರಕರಣಗಳಿಗೂ ಶಿಕ್ಷೆ ಹಾಗೂ ದಂಡ ವಿಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ಮಹತ್ವದ ಆದೇಶವನ್ನು ಮಂಗಳವಾರ ನೀಡಿದೆ.

ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದರಿಂದ ನ್ಯಾಯಾಧೀಶ ಶ್ರಿನಿವಾಸ ಸುವರ್ಣ, ಆರೋಪಿಯನ್ನು ದೋಷಿ ಎಂಬುದಾಗಿ ಸೆ.5ರಂದು ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಸೆ.6ರಂದು ಪ್ರಕಟಿಸುವುದಾಗಿ ಆದೇಶಿಸಿದ್ದರು. ಅದರಂತೆ ಇಂದು ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದರು.

ಆರೋಪಿಗೆ ಐಪಿಸಿ ಕಲಂ 302(ಕೊಲೆ) ಅಡಿಯಲ್ಲಿ ಜೀವಿತಾವಧಿ ಜೈಲು ಶಿಕ್ಷೆ  ಮತ್ತು 15 ಸಾವಿರ ರೂ. ದಂಡ, ಪೋಕ್ಸೋ ಕಾಯ್ದೆಯಡಿ ಬರುವ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ 20 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಪ್ರಕರಣದಲ್ಲಿ 10 ವರ್ಷ ಜೈಲು ಮತ್ತು 5 ಸಾವಿರ ರೂ. ದಂಡ, ಸಾಕ್ಷ್ಯನಾಶದಡಿ 7 ವರ್ಷ ಜೈಲು ಹಾಗೂ 2 ಸಾವಿರ ರೂ. ದಂಡ ವಿಧಿಸಿದ್ದು ದಂಡ ಪಾವತಿ ಮಾಡಲು ತಪ್ಪಿದಲ್ಲಿ ಒಂದು ವರ್ಷ ಕಠಿಣ ಸಜೆ ವಿಧಿಸಿ ಆದೇಶಿಸಲಾಗಿದೆ.

ದಂಡದ 32 ಸಾವಿರ ರೂ. ಮೊತ್ತದಲ್ಲಿ 7 ಸಾವಿರ ರೂ. ಸರಕಾರಕ್ಕೆ, 25 ಸಾವಿರ ರೂ. ಮೊತ್ತ ಮೃತ ಬಾಲಕಿ ಕುಟುಂಬಕ್ಕೆ ಹಾಗೂ ಸರಕಾರದಿಂದ ಬಾಲಕಿ ಪೋಷಕರಿಗೆ ೪ ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.

ಉಡುಪಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 17ವರ್ಷ ಪ್ರಾಯದ ಬಾಲಕಿ 2019ರ ಮಾ.9ರಂದು ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಹನುಮಂತ ಅಪಹರಿಸಿ, ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿದ್ದನು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News