ಏಶ್ಯಕಪ್ ನಿಂದ ಮುಹಮ್ಮದ್ ಶಮಿಯನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿದ ರವಿ ಶಾಸ್ತ್ರಿ

Update: 2022-09-07 15:35 GMT

 ದುಬೈ: ಏಶ್ಯ ಕಪ್‌ನಲ್ಲಿ ಭಾರತವು ಸತತ ಎರಡು ಪಂದ್ಯಗಳಲ್ಲಿ ಯೋಗ್ಯ ಮೊತ್ತವನ್ನು ರಕ್ಷಿಸಿಕೊಳ್ಳಲು ವಿಫಲವಾಗಿದೆ ಹಾಗೂ  ಕಾಂಟಿನೆಂಟಲ್ ಈವೆಂಟ್‌ನ ಸೂಪರ್ 4 ಹಂತದಿಂದ ನಿರ್ಗಮಿಸುವ ಅಂಚಿನಲ್ಲಿದೆ. ರವಿವಾರದಂದು ಪಾಕಿಸ್ತಾನದ ವಿರುದ್ಧ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿದ ಹೊರತಾಗಿಯೂ ಗೆಲ್ಲಲು ವಿಫಲವಾದ ನಂತರ ಮಂಗಳವಾರ ರಾತ್ರಿ ಶ್ರೀಲಂಕಾ ವಿರುದ್ಧ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿದ ಸಂದರ್ಭದಲ್ಲೂ  ಮತ್ತೊಮ್ಮೆ ಎಡವಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಭುವನೇಶ್ವರ ಕುಮಾರ್ 19ನೇ ಓವರ್‌ನಲ್ಲಿ 19 ರನ್ ಬಿಟ್ಟುಕೊಟ್ಟರು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು 19ನೇ ಓವರ್‌ನಲ್ಲಿ 14 ರನ್‌ಗಳನ್ನು ಬಿಟ್ಟುಕೊಟ್ಟರು.  ಅವರ ಈ ಎರಡೂ ಪ್ರದರ್ಶನಗಳು ಆಯಾ ಪಂದ್ಯಗಳಲ್ಲಿ ಭಾರತದ ಅವಕಾಶಗಳಿಗೆ ದೊಡ್ಡ ಹೊಡೆತವನ್ನು ನೀಡಿದೆ.

ಶ್ರೀಲಂಕಾ ವಿರುದ್ಧದ ಸೋಲನ್ನು ವಿಶ್ಲೇಷಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ(Ravi Shastri) ಭಾರತ ಕ್ರಿಕೆಟ್ ತಂಡದಲ್ಲಿ ಕನಿಷ್ಠ ಒಬ್ಬ ಗುಣಮಟ್ಟದ ವೇಗಿಗಳ ಕೊರತೆಯಿದೆ ಎಂದು ಹೇಳಿದರು. ಮುಹಮ್ಮದ್ ಶಮಿಯಂತಹ ಬೌಲರ್ ಅನ್ನು ಏಶ್ಯಕಪ್ ಗೆ ಆಯ್ಕೆ ಮಾಡದಿರುವುದನ್ನು ಪ್ರಶ್ನಿಸಿದ್ದಾರೆ.

ಗಾಯದ ಸಮಸ್ಯೆಯಿಂದ ಜಸ್ಪ್ರೀತ್ ಬುಮ್ರಾ ಏಶ್ಯಕಪ್‌ನಲ್ಲಿ ಭಾಗವಹಿಸದಿದ್ದರೂ, ಮುಹಮ್ಮದ್ ಶಮಿಯನ್ನು(Mohammed Shami) ಆಯ್ಕೆ ಮಾಡಲಾಗಿರಲಿಲ್ಲ.

"ನೀವು ಪಂದ್ಯವನ್ನು ಗೆಲ್ಲಬೇಕಾದ ಸಂದರ್ಭದಲ್ಲಿ ಉತ್ತಮವಾಗಿ ತಯಾರಿ ನಡೆಸಬೇಕು. ಇಲ್ಲಿನ ಪರಿಸ್ಥಿತಿಗಳು ನಿಮಗೆ ತಿಳಿದಿರುವ ಕಾರಣ ವಿಶೇಷವಾಗಿ ವೇಗದ ಬೌಲರ್‌ಗಳಿಗೆ ಸಂಬಂಧಿಸಿದ ಆಯ್ಕೆಯು ಉತ್ತಮವಾಗಿರಬಹುದೆಂದು ನಾನು ಭಾವಿಸಿದ್ದೆ. ಇಲ್ಲಿನ ಪಿಚ್ ನಲ್ಲಿ  ಸ್ಪಿನ್ನರ್‌ಗೆ ಹೆಚ್ಚು ಅವಕಾಶ ಇರಲಿಲ್ಲ. ಕೇವಲ 4 ವೇಗದ ಬೌಲರ್‌ಗಳೊಂದಿಗೆ ನೀವು ಬಂದಿರುವುದು ನನಗೆ ತುಂಬಾ ಆಶ್ಚರ್ಯವಾಯಿತು. ನಿಮಗೆ ಹೆಚ್ಚುವರಿ ಬೌಲರ್ ಬೇಕಿತ್ತು. ಮುಹಮ್ಮದ್ ಶಮಿ ಅವರಂತಹವರು ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಇದು ನನ್ನನ್ನು ಕಂಗೆಡಿಸಿದೆ. ಐಪಿಎಲ್ ನಂತರ ಅವರನ್ನು ಟ್ವೆಂಟಿ-20 ತಂಡಕ್ಕೆ ಆಯ್ಕೆ ಮಾಡಿಲ್ಲ" ಎಂದು ರವಿ ಶಾಸ್ತ್ರಿ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News